ರಾಮನಗರ: ಸಿದ್ದರಾಮಯ್ಯ ಮೂಲತಃ ಕಾಂಗ್ರೆಸ್ ಪಕ್ಷದವರಲ್ಲ,ಅವರು ಬೇರೆ ಪಕ್ಷದಿಂದ ಬಂದವರು, ಆದರೂ, ನಾವು(ಕಾಂಗ್ರೆಸ್) ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಚುನಾವಣಾ ಅಭ್ಯರ್ಥಿ ಡಿ.ಕೆ ಸುರೇಶ್ ಹೇಳಿದ್ದಾರೆ.
ಅವರು ಶನಿವಾರ ರಾಮನಗರದಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ, ಸಿದ್ದರಾಮಯ್ಯ ಅವರು ಬೇರೆ ಪಕ್ಷದಿಂದ ಬಂದವರಾದರೂ ಜನಸೇವೆಗೆ ನಾವು ಅವಕಾಶ ಮಾಡಿಕೊಟ್ಟಿದ್ದೇವೆ. 2ನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಅವರು ನಮ್ಮ ನಾಯಕರಾಗಿದ್ದಾರೆ ಎಂದು ಹೇಳಿದರು. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಬಳಿಕ ರಾಜ್ಯಕ್ಕೆ ಹೊಸ ಕಾಯಕಲ್ಪ ಕೊಟ್ಟಿದ್ದಾರೆ. ಬಡವರಿಗಾಗಿ ಸಾಕಷ್ಟು ಕಾರ್ಯಕ್ರಮ ಕೊಟ್ಟಿದ್ದಾರೆ. ಹಾಗಾಗಿ ಹಣೆಯಲ್ಲಿ ಬರೆದಿದ್ದರೆ ಎಲ್ಲಾ ಆಗುತ್ತೆ, ಬರೆದಿಲ್ಲ ಎಂದಾದರೆ ಏನೂ ಮಾಡಲು ಸಾಧ್ಯವಿಲ್ಲವೆಂದು ಮಾರ್ಮಿಕವಾಗಿ ನುಡಿದರು.
ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರಿಗೆ ಬೀಗ ಹಾಕಿ ಕೂರಿಸಿದ್ದರು. ಅಮಾನತು ಮಾಡಿದ್ದರು. ಆದರೆ, ಅವರ ಯೋಗ ಅಲ್ಲಿ ಬರೆದಿರಲಿಲ್ಲ, ಇಲ್ಲಿ (ಕಾಂಗ್ರೆಸ್) ಬರೆದಿತ್ತು. ಹಾಗೆಯೇ ನಿಮ್ಮ ಯೋಗ ಸಹ ಬರೆದಿರಬಹುದು. ಯಾರನ್ನೂ ಅಡ್ಡ ಹಾಕೋಕೆ ಹೋಗಬೇಡಿ, ಪಕ್ಷ ಬೆಳೆಯುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.