ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನಯವಂಚಕರು, ತಮ್ಮನ್ನು ಅಧಿಕಾರದಲ್ಲಿ ಕೂರಿಸಿದ
ದಲಿತರ ಬೆನ್ನಿಗೆ ಚೂರಿ ಹಾಕಿದ್ದಾರೆ. ದಲಿತ ಸಮುದಾಯದ ಶಾಪ ತಟ್ಟಿದ್ದು, ಮುಡಾ ಹಗರಣದ ಹೊಣೆಹೊತ್ತು ಕೂಡಲೇ ರಾಜೀನಾಮೆ ಕೊಡಬೇಕೆಂದು ‘ಅಹಿಂದ’ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಭಾಸ್ಕರ್ ಪ್ರಸಾದ್ ಒತ್ತಾಯಿಸಿದರು.
ಅವರು ತುಮಕೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಸಮುದಾಯಗಳಿಗೆ ಮೋಸ ಮಾಡುತ್ತಿದೆ. ಕಳೆದ ಎರಡು ವರ್ಷದಲ್ಲಿ ₹26 ಸಾವಿರ ಕೋಟಿ SCSP ಹಾಗೂ TSP ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ. ದಲಿತರ ಹೋರಾಟ, ವಿರೋಧ ಹತ್ತಿಕ್ಕಲು ದಲಿತ ಸಮುದಾಯದ ಕೆಲವು ಹಿರಿಯ ಮುಖಂಡರನ್ನು ರಕ್ಷಣೆಗೆ ನಿಲ್ಲಿಸಿಕೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಹಾಲಿ ಸರ್ಕಾರದಲ್ಲಿ ದಲಿತರ ಅಭಿವೃದ್ಧಿಗೆ ಎಷ್ಟು ಹಣ ಮೀಸಲಿಟ್ಟಿದ್ದರು. ಅದರಲ್ಲಿ ಖರ್ಚು ಮಾಡಿದ್ದೆಷ್ಟು ಎನ್ನುವ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.ಒಕ್ಕೂಟದ ಸಂಚಾಲಕ ಪ್ರೊ.ಎ.ಹರಿರಾಂ, ‘ಬಿಜೆಪಿಯರನ್ನು ದಲಿತ ವಿರೋಧಿಗಳು, ಕೋಮುವಾದಿಗಳು ಎಂದು ಟೀಕಿಸಿದ್ದೆವು.ಚುನಾವಣೆಯಲ್ಲಿ ಅವರನ್ನು ಮನೆಗೆ ಕಳುಹಿಸಲಾಯಿತು. ಎಲ್ಲವನ್ನು ಸರಿಪಡಿಸಲು ಸೂಕ್ತವಾದ ನಾಯಕತ್ವ ಬೇಕು ಎಂದು ಒಂದು ವರ್ಷದ ಕಾಲ ದಲಿತ, ಹಿಂದುಳಿದ ಸಂಘಟನೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶ್ರಮಿಸಿವೆ. ಕಾಂಗ್ರೆಸ್ ಅಧಿಕಾರ ಹಿಡಿದ ನಂತರ ಪರಿಶಿಷ್ಟರ ಯೋಜನೆಗಳಿಗೆ ಕತ್ತರಿ ಹಾಕುತ್ತಿದೆ’ ಎಂದು ಆರೋಪಿಸಿದರು.
ಕಾಂಗ್ರೆಸ್ ನಾಯಕರು ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನಾವು ಅಧಿಕಾರಕ್ಕೆ ಬಂದರೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ತರುವ ಭರವಸೆ ನೀಡಿದ್ದರು. ಈಗ ಇದರ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಹಂಚಿಕೆ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದರೂ ಇನ್ನೂ ಒಂದು ನಿರ್ಧಾರಕ್ಕೆ ಬರುತ್ತಿಲ್ಲ. ತೀರ್ಪಿನ ನಂತರ ಸಿದ್ದರಾಮಯ್ಯ ಚರ್ಚೆ ಮಾಡುತ್ತೇನೆ. ಕರೆದು ಸಂಧಾನ ಮಾಡುತ್ತೇನೆ ಎನ್ನುತ್ತಿದ್ದಾರೆ. ಇದನ್ನು ಬಿಟ್ಟು ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಜು.28ರಂದು ಕಾಂಗ್ರೆಸ್ ಹಠಾವೋ, ದಲಿತ್ ಬಚಾವೋ’ ಪ್ರತಿಭಟನೆ:
ಅಹಿಂದ’ ಸಂಘಟನೆಗಳ ಒಕ್ಕೂಟದಿಂದ ಆ. 28ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ‘ಕಾಂಗ್ರೆಸ್ ಹಠಾವೋ, ದಲಿತ್ ಬಚಾವೋ’ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ಪರಿಶಿಷ್ಟರ ರಕ್ಷಣೆ, ನಮ್ಮ ಹಕ್ಕು ಕೇಳಲು ಪ್ರತಿಭಟನೆ ನಡೆಯಲಿದೆ. ನಮ್ಮ ಪಾಲಿನ ಹಣದಿಂದ ಬೇರೆಯವರ ಹೊಟ್ಟೆ ತುಂಬುತ್ತಿದೆ. ಪ್ರತಿ ವರ್ಷ ಸಾವಿರಾರು ಕೋಟಿ ಮೀಸಲಿಟ್ಟರೂ ಸಮುದಾಯಗಳ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಅಹಿಂದ ಸಂಘಟನೆಗಳ ಒಕ್ಕೂಟದ ಸಂಚಾಲಕರಾದ ಶಂಕರ್ ಲಿಂಗಯ್ಯ, ಶ್ರೀನಿವಾಸ್ ಮೂರ್ತಿ, ಸಿದ್ದಾಪುರ ಮಂಜುನಾಥ್ ಹಾಜರಿದ್ದರು.
`