ಬೆಂಗಳೂರು : ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟಕ್ಕೂ ಮಂಗಳೂರಿನ ಕುಕ್ಕರ್ ಬಾಂಬ್ ಸ್ಪೋಟಕ್ಕೂ ಸಾಮ್ಯತೆಯಿದೆ, ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ.ಬಿಜೆಪಿಯವರು ಈ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದ್ದಾರೆ, ಈ ವಿಚಾರದಲ್ಲಿ ಸಹಕಾರ ಕೊಡಲಿ,ಇಲ್ಲವಾದರೆ ರಾಜಕಾರಣವೇ ಮಾಡಲಿ ಎಂದು ಕಿಡಿಕಾರಿದರು.
ಈಗಾಗಲೇ ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪತ್ತೆಗೆ 8 ತನಿಖಾ ತಂಡಗಳನ್ನು ರಚಿಸಲಾಗಿದೆ.ಎಲ್ಲಾ ಆಯಾಮಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಬಸ್ ನಿಂದ್ ಇಳಿದು ತಿಂಡಿ ತಿಂದು ಮತ್ತೆ ಬಸ್ ನಲ್ಲಿ ತೆರಳಿದ್ದಾನೆ. ಸಂಪೂರ್ಣ ಪ್ರಕರಣ ಕುರಿತಂತೆ ತನಿಖೆ ನಡೆಯುತ್ತಿದೆ.ತನಿಖೆ ನಡೆಸಲು ನಮ್ಮ ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದೇವೆ ಎಂದರು. ಮಂಗಳೂರು ಹಾಗೂ ಶಿವಮೊಗ್ಗ ಪೊಲೀಸ್ ಅಧಿಕಾರಿಗಳು ಇಲ್ಲಿಗೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಗಾಬರಿ ಪಡುವಂಥದ್ದು ಏನೂ ಇಲ್ಲ ಸ್ಥಳೀಯ ಕಚ್ಚಾ ಸಾಮಗ್ರಿಗಳನ್ನು ಬಳಸಿ ಬಾಂಬ್ ತಯಾರಿಕೆ ಮಾಡಿದ್ದು, ಟೈಮರ್ ಡೆಟೋನೇಟರ್ ಎಲ್ಲಾ ವಸ್ತುಗಳು ಪತ್ತೆಯಾಗಿವೆ.
ಈ ಪ್ರಕರಣದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದ್ದರೆ ಅವರ ಬೆಂಬಲ ನಮಗೆ ಬೇಕಾಗಿಲ್ಲ. ಬೆಂಗಳೂರನ್ನು ಹೆಸರನ್ನು ಹಾಳು ಮಾಡಕ್ಕೆ ಬಿಜೆಪಿಯವರು ಪ್ರಯತ್ನ ಮಾಡುತ್ತಿದ್ದಾರೆ.ಅವರು ಮಾಡಿಕೊಳ್ಳಲಿ ಅವರ ಸಹಕಾರ ನಮಗೆ ಬೇಕಿಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.