ಕಾರ್ಕಳ, ಆ,14: ಖಾಸಗಿ ಫೈನಾನ್ಸ್ ಕಂಪೆನಿಯ ಸಿಬ್ಬಂದಿಗಳ ಲಾರಿ ಸೀಜ್ ಮಾಡಲು ಬಂದ ಸಂದರ್ಭದಲ್ಲಿ ಚಾಲಕನ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವ ಘಟನೆ ಕಾರ್ಕಳ ತಾಲೂಕಿನ ಸೂಡ ಎಂಬಲ್ಲಿ ನಡೆದಿದೆ.
ಸೂಡ ಗ್ರಾಮದ ಓರಿಯಂಟಲ್ ಕ್ರಶರ್ ನಲ್ಲಿ ಆ 12 ರಂದು ತಡರಾತ್ರಿ 11.30 ರ ವೇಳೆ ಆರೋಪಿಗಳಾದ ಜಾಯ್ಸನ್, ಗೋಪಾಲ, ಮಂಜುನಾಥ ಹಾಗೂ ಇತರರು ಲಾರಿ ಚಾಲಕ ರಂಗಸ್ವಾಮಿ ಎಂಬವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುವ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಆರೋಪಿಗಳು ಚಾಲಕ ರಂಗಸ್ವಾಮಿಯನ್ನು ಲಾರಿಯಿಂದ ಇಳಿಸಿ ಲಾರಿ ಸೀಜ್ ಮಾಡುತ್ತೇವೆ ಲಾರಿಯ ಕೀ ಕೊಡುವಂತೆ ಹೇಳಿದಾಗ ರಂಗಸ್ವಾಮಿ ಕೀ ಕೊಡಲು ನಿರಾಕರಿಸಿದಾಗ ಆರೋಪಿ ಜಾಯ್ಸನ್ ಏಕಾಎಕಿ ರಂಗಸ್ವಾಮಿಯನ್ನು ಕಾಲಿನಿಂದ ತುಳಿದು ಸ್ಪಾನರ್ ನಿಂದ ಹಲ್ಲೆಗೈದು ,ಕೀ ಕೊಡದಿದ್ದರೆ ಕೊಲ್ಲುವುದಾಗಿ ಜೀವ ಬೆದರಿಕೆಯೊಡ್ಡಿ,ಬಲವಂತವಾಗಿ ಲಾರಿಯನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ರಂಗಸ್ವಾಮಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಲಾರಿಯು ಸಚಿನ್ ಎಂಬವರಿಗೆ ಸೇರಿದ್ದು ಅವರು ಟಾಟಾ ಫೈನಾನ್ಸ್ ನಲ್ಲಿ ಸಾಲ ಮಾಡಿ ಲಾರಿ ಖರೀದಿಸಿದ್ದು, ಸಾಲ ಬಾಕಿಯ ವ್ಯಾಜ್ಯ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.