

ಕಾರ್ಕಳ: ಪರಶುರಾಮ ಥೀಮ್ ಪಾರ್ಕಿನಲ್ಲಿ ನಕಲಿ ಪರಶುರಾಮ ಮೂರ್ತಿ ಪ್ರತಿಷ್ಟಾಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಶಾಸಕ ಸುನಿಲ್ ಕುಮಾರ್ ಓರ್ವ ಸುಳ್ಳಿನ ಸರದಾರ, ಸುಳ್ಳೇ ಇವರ ಮನೆದೇವರು ಎಂದು ಮುನಿಯಾಲು ಉದಯ ಶೆಟ್ಟಿ ಆರೋಪಿಸಿದ್ದಾರೆ.
ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಂದು ಸುಳ್ಳನ್ನು ನೂರು ಸಲ ಹೇಳಿ ಸತ್ಯ ಮಾಡುವ ಚಾಕಚಕ್ಯತೆ ಶಾಸಕರಿಗಿದೆ. ಫೈಬರ್ ಮೂರ್ತಿಯನ್ನು ಬದಲಾಯಿಸಿ ಮತ್ತೆ ಕಳಪೆ ಗುಣಮಟ್ಟದ ಹಿತ್ತಾಳೆ ಪ್ರತಿಮೆ ಮಾಡುತ್ತಿದ್ದಾರೆ, ಈ ಪ್ರಯತ್ನ ಕೂಡ ನಡೆಯಲಿಲ್ಲ,ಇದಕ್ಕೆ ಪರಶುರಾಮನ ಪವಾಡವೇ ಕಾರಣ ಎಂದರು.ಪರಶುರಾಮ ಥೀಮ್ ಪಾರ್ಕಿನಲ್ಲಿ ಮತ್ತೆ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕೆಂದು ನಾನು ಕೋರ್ಟಿನಲ್ಲಿ ಪಿಐಎಲ್ ಹಾಕಿದಾಗ ಬಿಜೆಪಿಯವರಿಗೆ ಚಟಪಡಿಕೆ ಉಂಟಾಗಿದ್ದು,ನಮ್ಮಿAದ ಮಾಡಲಾಗದ್ದನ್ನು ಕಾಂಗ್ರೆಸ್ ಮಾಡುತ್ತಿದೆಯಲ್ಲಾ ಎನ್ನುವ ಹೊಟ್ಟೆಉರಿ ಶುರುವಾಗಿದೆ ಎಂದರು. ಕಳೆದ 20 ವರ್ಷಗಳಿಂದ ಸುನಿಲ್ ಕುಮಾರ್ ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡಿಲ್ಲ. ಕೇವಲ ಸುಳ್ಳು ಹೇಳಿಕೊಂಡು ಜಾತಿ ರಾಜಕಾರಣದ ಮೂಲಕ ದ್ವೇಷದ ರಾಜಕಾರಣ ಮಾಡಿರುವುದೇ ಇವರ ಸಾಧನೆಯಾಗಿದೆ ಎಂದರು.
ಆ 6ರಂದು ಬಿಜೆಪಿ ನಡೆಸುತ್ತಿರುವ ಬಿಜೆಪಿ ರ್ಯಾಲಿ ಪ್ರತಿಭಟನಾ ರ್ಯಾಲಿಯಲ್ಲ ಅದು ಪಶ್ವಾತ್ತಾಪದ ಯಾತ್ರೆ, ಸುನಿಲ್ ಕುಮಾರ್ ಅವರ ಸುಳ್ಳಿನ ಗೋಪುರ ಮುರಿದುಬಿದ್ದಿದೆ, ಅವರು ಪರಶುರಾಮನ ಮೂರ್ತಿ ನಕಲಿಯಲ್ಲವೆಂದು ಬೈಲೂರಿನ ಮಾರಿಗುಡಿಯಲ್ಲಿ ಪ್ರಮಾಣ ಮಾಡಲಿ ಎಂದು ಸವಾಲೆಸೆದರು.


