ಬೆಂಗಳೂರು: ಬಡವರಿಗಾಗಿ ರೂಪಿಸಲಾಗಿರುವ ‘ಅನ್ನಭಾಗ್ಯ’ ಯೋಜನೆಯ ಅಕ್ಕಿಯನ್ನು ಮಾರಾಟ ಮಾಡುವವರ ವಿರುದ್ಧ ಜಿಲ್ಲಾಧಿಕಾರಿಗಳು ಮುಲಾಜಿಲ್ಲದೆ ಕ್ರಮ ಜರುಗಿಸಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ಖಡಕ್ ಸೂಚನೆ ನೀಡಿದೆ.
ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯ ಮೂರ್ತಿ ವಿ.ಶ್ರೀಷಾನಂದ ಅವರು ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಹೋಟೆಲ್‌ಗಳಿಗೆ ಮಾರಾಟ ಮಾಡುವ ಮಾಫಿಯಾ ಬಗ್ಗೆ ಕಿಡಿಕಾರಿದರು. ಅಕ್ಕಿ ಕಳ್ಳಸಾಗಣೆ ಮಾಡುವವರನ್ನು ರಾಜಕಾರಣಿಗಳು ರಕ್ಷಿಸುತ್ತಾರೆ. ಅಂತಹ ಅಯೋಗ್ಯರ ಬೆನ್ನಿಗೆ ನಿಲ್ಲುತ್ತಾರೆ. ಕಾನೂನನ್ನು ಎಷ್ಟೇ ಕಠಿಣಗೊಳಿಸಿದರೂ ಕಳ್ಳಸಾಗಣೆದಾರರು, ನಿನ್ನ ಮೊಣಕೈಗೆ ಹತ್ತಿರುವ ಜೇನು, ತುಪ್ಪವನ್ನು ನಾನು ನೆಕ್ಕುತ್ತೇನೆ, ನನ್ನ ಮೊಣಕೈಗೆ ಮೆತ್ತಿರುವ ಜೇನುತುಪ್ಪವನ್ನು ನೀನು ನೆಕ್ಕು ಎನ್ನುವ ಮಟ್ಟಕ್ಕೆ ಇಳಿದಿದ್ದಾರೆ ಎಂದು ಕಿಡಿಕಾರಿದರು.
ಯಾರೋ ಕೆಲವು ಅದೃಷ್ಟವಂತರು ತಮ್ಮ ತಂದೆ-ತಾತ ಮಾಡಿದ ಪುಣ್ಯದಿಂದ ಇವತ್ತು ಸಮಾಜದಲ್ಲಿ ಉತ್ತಮ ಸ್ಥಾನಮಾನ ಅನುಭವಿಸುತ್ತಾ ಇದ್ದಾರೆ. ಬಡವರಿಗೆ ಅಂತಹ ಭಾಗ್ಯ ಇರುವುದಿಲ್ಲ. ಅನ್ನಭಾಗ್ಯದಲ್ಲಿ ಜನರ ದುಡ್ಡು ಅಡಗಿರುತ್ತದೆ. ಸರ್ಕಾರ ಅದಕ್ಕೆ ಸಬ್ಸಿಡಿ ನೀಡುವ ಮೂಲಕ ಬಡವರ ಉದ್ಧಾರಕ್ಕೆ ಎಂದು ಯೋಜನೆ ಜಾರಿಗೊಳಿಸಿರುತ್ತದೆ. ಅನ್ನಭಾಗ್ಯದಂತಹ ಜನಪರ ಯೋಜನೆ ನಿಜವಾದ ಬಡವರಿಗೆ ತಲುಪಬೇಕು. ಅನ್ಯಭಾಗ್ಯ ಯೋಜನೆ ಅಕ್ಕಿಯ ಕಳ್ಳಸಾಗಣೆ ನಿಯಂತ್ರಿಸಲು ಜಿಲ್ಲಾಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು ಎಂದು ನ್ಯಾಯಪೀಠ ಹೇಳಿತು