Share this news

ಬೆಂಗಳೂರು: ಲೋಕಸಭಾ ಚುನಾವಣೆ ಮುಗಿಯಲು ಇನ್ನು ಕೇವಲ 2 ಹಂತಗಳು ಬಾಕಿಯಿದ್ದು,ಜೂನ್ 4ರಂದು ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಬಿಬಿಎಂಪಿ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗೆ ಸರ್ಕಾರ ಸಜ್ಜಾಗಲಿದೆ ಎನ್ನುವ ಮಾಹಿತಿ ಲಭಿಸಿದೆ.
ರಾಜ್ಯದಲ್ಲಿ ಎಷ್ಟು ಲೋಕಸಭಾ ಸ್ಥಾನಗಳನ್ನು ಗೆಲ್ಲಬಹುದು ಎನ್ನುವ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್ ಈ ಬಾರಿ BBMP ಹಾಗೂ ಗರಿಷ್ಠ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಆಡಳಿತವನ್ನು ತನ್ನ ತೆಕ್ಕೆಗೆ ಪಡೆಯಲು ರಣತಂತ್ರ ಹೆಣೆಯುತ್ತಿದೆ.
ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ತಾಲೂಕು ಹಾಗೂ ಜಿಲ್ಲಾ ಪಂಚಾಯತ್‌ ಚುನಾವಣೆ ಮಳೆಗಾಲದ ನಂತರವೇ ನಡೆಯುವ ಸಂಭವವಿದೆ.
ಚುನಾವಣೆ ನಡೆಸುವ ಸಂಬಂಧ ಈಗಾಗಲೇ ತಾ.ಪಂ. ಹಾಗೂ ಜಿಲ್ಲಾ ಪಂಚಾಯತ್‌ ಕ್ಷೇತ್ರಗಳ ಗಡಿ ಹಾಗೂ ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ನಿರ್ಧರಿಸಿದ್ದರೂ ವಾರ್ಡ್‌ವಾರು ಮೀಸಲಾತಿ ನಿಗದಿಗೊಳಿಸುವುದು ಬಾಕಿ ಇದೆ. ಈ ಬಗ್ಗೆ ಅಧಿಸೂಚನೆ ಹೊರಡಿಸಿ ಆಕ್ಷೇಪ ಆಹ್ವಾನಿಸಬೇಕಾಗಿದೆ. ಈ ಸಂಬಂಧ ಬಂದ ಆಕ್ಷೇಪಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿ ಪ್ರಕಟಿಸುವುದು ಬಾಕಿ ಇದೆ. ಇದಾದ ನಂತರ ರಾಜ್ಯ ಚುನಾವಣಾ ಆಯೋಗ ಚುನಾವಣೆ ನಡೆಸಬೇಕಾಗುತ್ತದೆ. ಪಂಚಾಯಿತಿಗಳ ಚುನಾವಣೆ ನಡೆಸುವ ಸಂಬಂಧ ಕಳೆದ ಡಿಸೆಂಬರ್‌ನಲ್ಲಿ ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್‌ 10 ದಿನದಲ್ಲಿ ಮೀಸಲಾತಿ ಪ್ರಕಟಿಸಿ, ಆಕ್ಷೇಪ ಆಹ್ವಾನಿಸಿ, ಅಂತಿಮ ಮೀಸಲಾತಿ ಪಟ್ಟಿ ಪ್ರಕಟಿಸಬೇಕು. ಇದಾದ ನಂತರ ಎರಡು ತಿಂಗಳಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸರ್ಕಾರಕ್ಕೆ ತಿಳಿಸಿತ್ತು. ಅದರಂತೆ ರಾಜ್ಯ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳ ಒಟ್ಟಾರೆ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿತ್ತು. ಆದರೆ ವಾರ್ಡ್‌ಗಳ ಮೀಸಲಾತಿ ಮಾತ್ರ ಈವರೆಗೆ ಅಂತಿಮಗೊಂಡಿಲ್ಲ.

ಸಧ್ಯ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಜತೆಗೆ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ನಡೆಯುತ್ತಿದೆ. ಇದಾದ ನಂತರ ವಿಧಾನ ಪರಿಷತ್ತಿನ 11 ಸ್ಥಾನಗಳ ಚುನಾವಣೆ ಎದುರಾಗಲಿದೆ. ಈ ಎಲ್ಲಾ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಪಂಚಾಯಿತಿ ಚುನಾವಣೆ ನಡೆಸುವ ಬಗ್ಗೆ ಸರ್ಕಾರ ಚರ್ಚಿಸಿ ನಿರ್ಧರಿಸುವ ಸಾಧ್ಯತೆ ಇದೆ.

ಜೂನ್‌ ತಿಂಗಳಿಂದ ಮಳೆಗಾಲ ಶುರುವಾಗಲಿರುವುದರಿಂದ ಮಳೆಗಾಲ ಮುಗಿದ ಮೇಲೆ ಅಂದರೆ ಅಕ್ಟೋಬರ್‌ ನಂತರವೇ ಚುನಾವಣೆ ನಡೆಸಬಹುದಾಗಿದೆ. ಅಷ್ಟರೊಳಗೆ ಕಾನೂನಿನ ಎಲ್ಲಾ ಅಡೆ-ತಡೆಗಳನ್ನು ನಿವಾರಿಸಲು ಸರ್ಕಾರಕ್ಕೆ ಅವಕಾಶವಿದೆ.
ಈ ನಡುವೆ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್ ಪಕ್ಷ ಸಂಘಟನೆಗೆ ಕಾರ್ಯಕರ್ತರು ಒತ್ತು‌ನೀಡಬೇಕೆಂದು ಕರೆ ನೀಡಿದ್ದು, ಲೋಕಸಭಾ ಚುನಾವಣೆ ಬೆನ್ನಲ್ಲೇ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣಾ ಕಾವು ಚುರುಕು ಪಡೆಯಲಿದೆ.

 

 

 

 

 

 

 

 

                        

                          

 

Leave a Reply

Your email address will not be published. Required fields are marked *