Share this news

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ‍್ಯ ದಿನಾಚರಣೆ ಭಾಷಣದಲ್ಲಿ ಹಲವು ವಸ್ತುಗಳ ಜಿಎಸ್‌ಟಿ (GST) ದರ ಇಳಿಸುವ ಮೂಲಕ ದೇಶದ ಜನರಿಗೆ ದೀಪಾವಳಿ ಉಡುಗೊರೆ ಕೊಡುವುದಾಗಿ ತಿಳಿಸಿದ್ದರು. ಸರ್ಕಾರ ಈಗ ನುಡಿದಂತೆ ನಡೆದಿದ್ದು, ಜಿಎಸ್‌ಟಿ ಪರಿಷ್ಕರಣೆ ಮಾಡಿದೆ. ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿ ದೊಡ್ಡ ಮಟ್ಟದ ಪರಿಷ್ಕರಣೆ ಮಾಡಲಾಗಿದ್ದು, ಶೇ 12 ಮತ್ತು ಶೇ 28ರ ಸ್ಲ್ಯಾಬ್‌ಗಳನ್ನು ರದ್ದು ಮಾಡಲಾಗಿದೆ. ಶೇ 5 ಮತ್ತು ಶೇ 18ರ ತೆರಿಗೆ ಸ್ಲ್ಯಾಬ್‌ಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರಿಂದ ಅನೇಕ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ. ಮತ್ತೊಂದೆಡೆ, ಕೆಲವು ವಸ್ತುಗಳಿಗೆ ಜಿಎಸ್‌ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಅಂದರೆ, ಶೂನ್ಯ ತೆರಿಗೆ ಅಡಿ ತರಲಾಗಿದೆ.

ಯುಎಚ್‌ಟಿ ಮಿಲ್ಕ್, ಪ್ಯಾಕ್ ಮಾಡಿದ ಚೆನ್ನಾ, ಪನ್ನೀರ್, ಇಂಡಿಯನ್ ಬ್ರೆಡ್ಸ್, ರೋಟಿ, ಕಾಕ್ರಾ, ಚಪಾತಿ, ಪರೋಟ, ಪಿಜ್ಜಾ ಹಾಗೂ ಬ್ರೆಡ್ ಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.ಆಹಾರ ವಸ್ತುಗಳು ಮಾತ್ರವಲ್ಲದೆ, ಮಕ್ಕಳ ಕಲಿಕಾ ಸಾಮಗ್ರಿಗಳ ಮೇಲಿನ ಜಿಎಸ್‌ಟಿಯನ್ನೂ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಮ್ಯಾಪ್ಸ್, ಚಾರ್ಟ್ಸ್ ಮತ್ತು ಗ್ಲೋಬ್ಸ್, ಪೆನ್ಸಿಲ್ಸ್, ಶಾರ್ಪರ್ನರ್ಸ್, ಎರೇಸರ್, ಕ್ರಯನ್ಸ್, ಮತ್ತು ಪ್ಯಾಸ್ಟೆಲ್‌ಗಳು, ಎಕ್ಸರ್‌ಸೈಸ್ ಬುಕ್ಸ್ ಮತ್ತು ನೋಟ್ ಪುಸ್ತಕಗಳು ಇನ್ನುಮುಂದೆ ಶೂನ್ಯ ತೆರಿಗೆ ವ್ಯಾಪ್ತಿಗೆ ಬರಲಿವೆ. ಅಷ್ಟೇ ಅಲ್ಲದೆ ವೈಯಕ್ತಿಕ ಜೀವವಿಮೆ ಮತ್ತು ಆರೋಗ್ಯ ವಿಮೆಗೆ ಕೇಂದ್ರಸರ್ಕಾರ ಬಹುದೊಡ್ಡ ರಿಯಾಯಿತಿ ನೀಡಿದ್ದು, ಶೇ 18ರ ಜಿಎಸ್‌ಟಿಯನ್ನು ಶೂನ್ಯಕ್ಕೆ ಇಳಿಕೆ ಮಾಡಲಾಗಿದೆ.

ಬಡ, ಮಧ್ಯಮ ವರ್ಗದ ಜನರ ಹಿತದೃಷ್ಟಿಯಲ್ಲಿ ತೆರಿಗೆ ಪರಿಷ್ಕರಣೆ ಮಾಡಲಾಗಿದ್ದು, ಐಷಾರಾಮಿ ವಸ್ತುಗಳ ತೆರಿಗೆ ಏರಿಕೆಯಾಗಿದೆ. ಈವರೆಗೆ ಶೇಕಡಾ 28ರಷ್ಟು ತೆರಿಗೆ ವ್ಯಾಪ್ತಿಯಲ್ಲಿ ಬರುತ್ತಿದ್ದ ಐಷಾರಾಮಿ ವಸ್ತುಗಳಿಗೆ ಇನ್ಮುಂದೆ ಶೇ 40 ರ ಜಿಎಸ್‌ಟಿ ಪಾವತಿಸಬೇಕಾಗಲಿದೆ. ಸಿಗರೇಟ್, ಸಿಗಾರ್, ಪಾನ್ ಮಸಾಲ, ಜರ್ದಾ, ಬೀಡಿ, ತಂಬಾಕು, ಜಗಿಯುವ ವಸ್ತುಗಳು ಇನ್ಮುಂದೆ 40 ಪರ್ಸೆಂಟ್ ಜಿಎಸ್‌ಟಿ ಅಡಿಯಲ್ಲಿ ಬರುತ್ತವೆ. ಅಧಿಕ ಸಕ್ಕರೆ ಅಂಶ ಇರುವ ಪಾನೀಯಗಳು, ಸೋಡಾ, ಕೂಲ್ ಡ್ರಿಂಕ್ಸ್, ಹಣ್ಣಿನ ಕಾರ್ಬೊನೇಟೆಡ್ ಪಾನಿಯಗಳು, ಕೆಫೀನ್ ಹೊಂದಿರುವ ಪಾನಿಯಗಳ ಮೇಲೆ ಶೇ 40ರಷ್ಟು ತೆರಿಗೆ ಬೀಳಲಿದೆ. ಪ್ಲೈಟ್, ಹೆಲಿಕಾಪ್ಟರ್, ಐಷಾರಾಮಿ ಕಾರುಗಳು, 1500 ಸಿಸಿಗಿಂತ ಹೆಚ್ಚು, 4,000 ಮಿ.ಮೀ ಉದ್ದವಿರುವ ಕಾರುಗಳು, 350 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಬೈಕ್‌ಗಳ ದರಗಳು ಇನ್ನಷ್ಟು ದುಬಾರಿಯಾಗಲಿವೆ. ಖಾಸಗಿ ವಿಮಾನ, ಹೆಲಿಕಾಪ್ಟರ್ ಬಳಕೆ, ಮನರಂಜನೆಗೆ ದೋಣಿ, ಇತರ ಹಡಗುಗಳ ಬಳಕೆ, ಹೆಚ್ಚು ಸಾಮರ್ಥ್ಯದ ರಿವಾಲ್ವಾರ್, ಪಿಸ್ತೂಲ್‌ಗಳ ಮೇಲೆ ಶೇ 40 ರ ಸ್ಲ್ಯಾಬ್ ಇರಲಿದೆ.

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *