ಶಿವಮೊಗ್ಗ : ಶರಾವತಿ ಹಿನ್ನೀರಿನ ತುಮರಿ ಕಳಸವಳ್ಳಿ ಭಾಗದಲ್ಲಿ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಸಂಪರ್ಕಿಸುವ ದೇಶದ ಎರಡನೇ ಅತಿ ಉದ್ದದ ತೂಗು ಸೇತುವೆ ಜುಲೈ 14ರಂದು ಉದ್ಘಾಟನೆಯಾಗಲಿದೆ. ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸೇತುವೆ ಉದ್ಘಾಟಿಸಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಸಮಾರಂಭದ ಸ್ಥಳ ಇನ್ನಷ್ಟೇ ನಿಗದಿಯಾಗಬೇಕಿದೆ.ಇಂದಿನಿಂದ ಎರಡನೇ ಹಂತದ ಲೋಡ್ ಟೆಸ್ಟ್ ನಡೆಯಲಿದೆ. ಅಲ್ಲದೇ ಕೊನೆಯ ಹಂತದ ಕೆಲಸ ಕಾರ್ಯ ಬಾಕಿ ಇದೆ ಎಂದು ತಿಳಿಸಿದರು.
ಇನ್ನು, ಸರ್ಕಾರದ ಆದೇಶದಲ್ಲಿ ಈ ಸೇತುವೆಗೆ ಹೊಳೆಬಾಗಿಲು ಕಳಸವಳ್ಳಿ ಸೇತುವೆ ಎಂದು ಉಲ್ಲೇಖಿಸಲಾಗಿದೆ. ಆದರೆ ಈ ಸೇತುವೆಗೆ ಸಿಗಂದೂರು ಚೌಡೇಶ್ವರಿ ಸೇತುವೆ ಎಂದು ನಾಮಕರಣ ಮಾಡಬೇಕು. ಈ ಕುರಿತು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಲಾಗುತ್ತದೆ ಎಂದು ರಾಘವೇಂದ್ರ ತಿಳಿಸಿದರು.