ಕಾರ್ಕಳ; ಕಳೆದ ಒಂದೂವರೆ ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಕಾರ್ಕಳ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಈ ಬಾರಿ ಅಧ್ಯಕ್ಷ ಹಾಗೂ ಆ.30ರಂದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣಾಧಿಕಾರಿಯಾಗಿರುವ ಕಾರ್ಕಳ ತಹಶೀಲ್ದಾರ್ ದಿನಾಂಕ ಪ್ರಕಟಿಸಿದ್ದಾರೆ. ಆ.30ರಂದು ಶುಕ್ರವಾರ ಬೆಳಗ್ಗೆ 9ರಿಂದ 11 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು ಮಧ್ಯಾಹ್ನ 1 ಗಂಟೆಯೊಳಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಮಧ್ಯಾಹ್ನ 1 ಗಂಟೆಗೆ ಹಾಜರಿರುವ ಸದಸ್ಯರ ಸಭೆ ನಡೆಸಿ ಚುನಾವಣೆ ನಡೆಸಲಾಗುತ್ತದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮಾರ್ಚ್ 27ಕ್ಕೆ ಪ್ರಥಮ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಅಧಿಕಾರವಧಿ ಮುಕ್ತಾಯವಾಗಿತ್ತು. ತದನಂತರ ವಿಧಾನಸಭೆ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಚುನಾವಣೆ ನಡೆಯದೇ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಿತ್ತು. ಇದೀಗ ಬರೋಬ್ಬರಿ 17 ತಿಂಗಳ ಬಳಿಕ ಉಳಿದ 1 ವರ್ಷದ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ದಿನಾಂಕ ನಿಗದಿಗೊಳಿಸಿದೆ. ಈ ಬಾರಿ ಉಪಾಧ್ಯಕ್ಷ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಕಾರ್ಕಳ ಪುರಸಭೆಯ ಅಧಿಕಾರದ ಗದ್ದುಗೆ ಯಾವ ಪಕ್ಷದ ಪಾಲಾಗಲಿದೆ ಎನ್ನುವ ಕುತೂಹಲ ಮೂಡಿಸಿದೆ
ಕಾಂಗ್ರೆಸ್ ಬಿಜೆಪಿ ನಡುವೆ ಸ್ಪರ್ಧೆ ಬಹುತೇಕ ಖಚಿತ
ಕಾರ್ಕಳ ಪುರಸಭೆಯ ಒಟ್ಟು 23 ಸದಸ್ಯರುಗಳ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 11 ಸದಸ್ಯಬಲ ಹೊಂದಿವೆ. ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಇದರ ಜತೆಗೆ ಶಾಸಕ ಹಾಗೂ ಲೋಕಸಭಾ ಸದಸ್ಯರಿಗೂ ಮತದಾನದ ಹಕ್ಕು ಇರುವ ಹಿನ್ನಲೆಯಲ್ಲಿ, ಬಿಜೆಪಿಯ 11 ಸದಸ್ಯರು ಹಾಗೂ ಶಾಸಕರು ಹಾಗೂ ಸಂಸದರು ಸೇರಿ ಸಂಖ್ಯಾ ಬಲ 13ಕ್ಕೆ ಏರಲಿದೆ. ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಬಹುತೇಕ ಖಚಿತ ಆದರೂ, ಇತ್ತ 11 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್ ಕೂಡ ಸಮಬಲದ ಸ್ಪರ್ಧೆ ಒಡ್ಡುವುದು ನಿಶ್ಚಿತ ಎನ್ನಲಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಶಭದ ರಾವ್, ಅಶ್ಪಕ್ ಅಹಮ್ಮದ್, ವಿನ್ನಿಬೋಲ್ಡ್ ಮೆಂಡೋನ್ಸಾ ಹಾಗೂ ನಳಿನಿ ಈ ನಾಲ್ವರಲ್ಲಿ ಇಬ್ಬರು ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಓರ್ವ ಪಕ್ಷೇತರ ಅಭ್ಯರ್ಥಿ ತಾನು ಯಾರ ಪರ ಎನ್ನುವುದು ಸಧ್ಯದ ಕುತೂಹಲ. ಈ ಕುರಿತು ಪಕ್ಷೇತರ ಸದಸ್ಯ ಲಕ್ಷಿö್ಮÃನಾರಾಯಣ ಮಲ್ಯ ಅವರಲ್ಲಿ ನೀವು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೀರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯ ನೋಟೀಸ್ ಬಂದಿದೆ, ಆದರೆ ಈವರೆಗೂ ಯಾರೂ ನನ್ನ ಬಳಿ ಕೇಳಿಲ್ಲ, ಚುನಾವಣೆಗೆ ಯೋಗ್ಯ ಅಭ್ಯರ್ಥಿಗಳು ಸ್ಪರ್ಧಿಸಿದರೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಒದಗಿಸುವವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ಇತ್ತ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಯೋಗೀಶ್ ದೇವಾಡಿಗ, ಪ್ರದೀಪ್ ರಾಣೆ ಹಾಗೂ ಪ್ರಶಾಂತ್ ಹೆಸರುಗಳಿದ್ದರೂ ಬಹುತೇಕ ಯೋಗೀಶ್ ದೇವಾಡಿಗ ಅವರ ಹೆಸರು ಅಂತಿಮಗೊಳ್ಳುವ ಸಾಧ್ಯತೆಯಿದೆ. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಮಹಿಳೆಯ ಪಾಲಾಗಲಿದೆ ಎನ್ನಲಾಗುತ್ತಿದ್ದರೂ ಈ ಹುದ್ದೆ ಪಕ್ಷೇತರ ಅಭ್ಯರ್ಥಿಗೆ ಒಲಿದರೂ ಅಚ್ಚರಿಯಿಲ್ಲ ಎನ್ನುವ ಮಾತುಗಳು ಕೂಡ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಆದರೆ ಈ ಕುರಿತು ಸ್ಪಷ್ಟ ಚಿತ್ರಣಕ್ಕಾಗಿ ಚುನಾವಣೆ ದಿನದವರೆಗೆ ಕಾಯಲೇಬೇಕು
ಒಟ್ಟಿನಲ್ಲಿ ಈ ಬಾರಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧಿಕಾರ ಬಿಜೆಪಿಗೆ ಒಲಿದರೂ ಕಾಂಗ್ರೆಸ್ ಕೂಡ ಸಮಬಲದ ಸ್ಪರ್ಧೆ ನೀಡಲಿದೆ
`