
ಬೆಂಗಳೂರು,ಡಿ.16: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ ನಲ್ಲಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ಆದರೆ ಹೈಕೋರ್ಟ್ ಆದೇಶದ ಹಿನ್ನೆಲೆ ಮುಷ್ಕರ ಕೈಬಿಟ್ಟಿದ್ದರು. ಇದೀಗ ಮತ್ತೆ ಮುಷ್ಕರಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು, ಈ ಬಾರಿ ದಿನಾಂಕ ಘೋಷಣೆ ಮಾಡದೆ ಏಕಾಏಕಿ ಬಸ್ ನಿಲ್ಲಿಸಿ ಮುಷ್ಕರ ನಡೆಸಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಬೇಡಿಕೆಗಳ ಸಂಬಂಧ ಶನಿವಾರ ಸಾರಿಗೆ ಸಚಿವರ ಜೊತೆಗೆ ಸಭೆ ನಡೆದಿತ್ತು. ಆದರೆ, ಬೇಡಿಕೆಗಳ ಈಡೇರಿಕೆ ಸಂಬಂಧ ಒಮ್ಮತಕ್ಕೆ ಬಾರದ ಹಿನ್ನೆಲೆ, ಮತ್ತೆ ಮುಷ್ಕರಕ್ಕೆ ಸಾರಿಗೆ ನೌಕರರು ಮುಂದಾಗುತ್ತಿದ್ದಾರೆ.
38 ತಿಂಗಳ ವೇತನ ಮತ್ತು 2024 ಜನವರಿಯಿಂದ 1.20 ಲಕ್ಷ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಮಾಡಬೇಕಿತ್ತು. ಆದರೆ 2025 ಡಿಸೆಂಬರ್ ಬಂದರೂ ವೇತನ ಹೆಚ್ಚಳ ಮಾಡಲು ಮುಂದಾಗಿಲ್ಲ. ಒಟ್ಟಿನಲ್ಲಿ ಸಾರಿಗೆ ನೌಕರರಿಗೆ ಸರ್ಕಾರ ನೀಡಬೇಕಿರುವ ಹಿಂಬಾಕಿ ನೀಡಲ್ಲ, ವೇತನ ಹೆಚ್ಚಳ ಮಾಡಲ್ಲ. ನೌಕರರ ಯಾವ ಬೇಡಿಕೆಯನ್ನು ಸರ್ಕಾರ ಈಡೇರಿಸುವ ಲಕ್ಷಣಗಳೇ ಕಾಣಿಸುತ್ತಿಲ್ಲ.
ದಿನಾಂಕ ನಿಗದಿ ಮಾಡಿ ಮುಂಚಿತವಾಗಿ ಮಾಹಿತಿ ನೀಡಿದರೆ ಸರ್ಕಾರ ಮತ್ತೆ ಮುಷ್ಕರಕ್ಕೆ ಅಡ್ಡಿ ಮಾಡಬಹುದು.
ಹಾಗಾಗಿ ಈ ಬಾರಿ ದಿನಾಂಕ ನಿಗದಿ ಮಾಡದೆ ಸಾರಿಗೆ ನೌಕರರು ಸರ್ಕಾರಕ್ಕೆ ಟಕ್ಕರ್ ಕೊಡಲು ಪ್ಲ್ಯಾನ್ ಮಾಡಿದ್ದಾರೆ. ಕಾರ್ಮಿಕ ಇಲಾಖೆಗೆ ಮುಷ್ಕರದ ನೋಟಿಸ್ ಕೂಡ ನೀಡದೆ ಏಕಾಏಕಿ ಬಸ್ಸುಗಳ ಸಂಚಾರ ನಿಲ್ಲಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
.
.
