
ಕಾರ್ಕಳ, ಅ.29: ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯು ಪ್ರಸ್ತುತ ಕಾಲಕ್ಕೆ ಸರಿಯಾಗಿಲ್ಲ.ಆದ್ದರಿಂದ ಈ ಕಾಯ್ದೆಯನ್ನು ಅಗತ್ಯಕ್ಕೆ ತಕ್ಕಂತೆ ಪರಿಷ್ಕರಿಸುವುದು ಅಗತ್ಯವೆಂದು ಹೈಕೋರ್ಟ್ ಹೇಳಿಕೆ ಸ್ವಾಗತಾರ್ಹ ಮತ್ತು ಸಕಾಲಿಕ ಎಂದು ಸಹಕಾರ ಭಾರತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಹೇಳಿದ್ದಾರೆ.
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ ಅವರಿದ್ದ ಏಕ ಸದಸ್ಯ ಪೀಠವು ಇತ್ತೀಚೆಗೆ ರಿಟ್ ಅರ್ಜಿಯೊಂದರ ವಿಚಾರಣೆಯ ಸಂದರ್ಭದಲ್ಲಿ ಕರ್ನಾಟಕ ಸಹಕಾರ ಸಂಘಗಳ ಓಬಿ ರಾಯನ ಕಾಲದ ಕಾಯಿದೆಗೆ ಈವರೆಗೆ ಆಡಳಿತ ನಡೆಸಿರುವ ಸರಕಾರಗಳು ಹಲವು ತಿದ್ದುಪಡಿಗಳನ್ನು ತಂದಿದ್ದರೂ, ಅಸ್ಪಷ್ಟತೆಗಳು ಇನ್ನೂ ಉಳಿದಿರುವುದನ್ನು ಪೀಠ ಗಮನಿಸಿದೆ. ಸಹಕಾರಿ ಕಾಯ್ದೆಯ ಅಡಿಯಲ್ಲಿ ಬರುವ ಸದಸ್ಯತ್ವದ ಹಕ್ಕುಗಳು, ಅನರ್ಹತೆ ,ಮತದಾರರ ಪಟ್ಟಿ ಸಿದ್ದಪಡಿಸುವುದು,ಕಾಲಕಾಲಕ್ಕೆ ಚುನಾವಣೆ ನಡೆಸುವುದು,ಲೆಕ್ಕಪರಿಶೋಧನೆ ಮತ್ತು ಆಡಳಿತ ಅಧಿಕಾರಿ ನೇಮಕಾತಿಗೆ ಸಂಬಂಧಿಸಿದ ಹಲವು ನಿಯಮಗಳಲ್ಲಿ ಸಂಘರ್ಷದ ಅಂಶಗಳಿವೆ.ಈ ಎಲ್ಲಾ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಪಿಎಸ್ ಕಾಯಿದೆಗೆ ತಾರ್ಕಿಕವಾಗಿ ಸಮಗ್ರ ತಿದ್ದುಪಡಿಯನ್ನು ಮಾಡಬೇಕಾಗಿದೆ ಎಂದು ಕೋರ್ಟ್ ಒತ್ತಿ ಹೇಳಿದೆ. ಯಾವುದೇ ಕಾಯ್ದೆ ಇರಲಿ ಕಾಲಕಾಲಕ್ಕೆ ಅವಶ್ಯಕತೆಗಳಿಗೆ ಸ್ಪಂದಿಸದೆ ಹೋದರೆ ಅದು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ ಮತ್ತು ಆ ಕಾಯ್ದೆಯನ್ನು ರೂಪಿಸಿದ ಉದ್ದೇಶವು ವ್ಯರ್ಥವಾಗುತ್ತದೆ. ಸಹಕಾರಿ ಸಂಸ್ಥೆಗಳ ಸ್ವಯತ್ತತೆಯನ್ನು ಹಾಗೂ ಆ ಸಂಸ್ಥೆಗಳಲ್ಲಿ ಸಾಂವಿಧಾನಿಕ ತತ್ವಗಳೊಂದಿಗೆ ದಕ್ಷತೆ ಪಾರದರ್ಶಕತೆ ಮತ್ತು ಹೊಂದಾಣಿಕೆ ಖಾತರಿ ಪಡಿಸಿಕೊಳ್ಳಲು ಅನುಕೂಲವಾಗುವಂತೆ ಕಾಯಿದೆಗೆ ತಿದ್ದುಪಡಿ ಮಾಡಬೇಕಾಗುತ್ತದೆ.
ಆದರೆ ಈ ತಿದ್ದುಪಡಿಯಲ್ಲಿ ಮಾಡಿರುವ ಅಂಶಗಳು ಕೆಲವೇ ಕೆಲವು ವಿಷಯಗಳಿಗೆ ಸೀಮಿತವಾಗಿದೆ ಹೊರತು ಹೈಕೋರ್ಟ್ ಹೇಳಿರುವಂತೆ ಕಾಯ್ದೆಯನ್ನು ಕೂಲಂಕುಶವಾಗಿ ಪರಿಶೀಲನೆಗೆ ಒಳಪಡಿಸಿ ಸಮಗ್ರ ತಿದ್ದುಪಡಿ ತರುವ ಉದ್ದೇಶವನ್ನು ಹೊಂದಿರಲಿಲ್ಲ.
ಹೈಕೋರ್ಟ್ ಹೇಳಿರುವಂತೆ ಹೊಸ ಸಮಗ್ರ ಸಹಕಾರಿ ಕಾಯ್ದೆಯನ್ನು ರೂಪಿಸಲು ತಜ್ಞರ ಸಮಿತಿ ರಚಿಸಿ, ಹಿರಿಯ ಅನುಭವಿ ಸಹಕಾರಿಗಳ ಸಲಹೆಗಳನ್ನು ಪಡೆದು ಕರ್ನಾಟಕ ರಾಜ್ಯದ ಸಹಕಾರಿ ಕ್ಷೇತ್ರದ ಆಮೂಲಾಗ್ರ ಬದಲಾವಣೆಗಾಗಿ ಹೊಸ ಕಾಯ್ದೆಯನ್ನು ರೂಪಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.





