ಕಾರ್ಕಳ: ಕುದುರೆಮುಖ ವನ್ಯಜೀವಿ ವ್ಯಾಪ್ತಿಯ ಈದು ನೂರಾಳ್‌ಬೆಟ್ಟು ಕಾಡಿನಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡಲು ಹೋಗಿದ್ದ ಇಬ್ಬರು ಆರೋಪಿಗಳನ್ನು ಕಾರ್ಕಳ ವನ್ಯಜೀವಿ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.
ನೂರಾಳ್‌ಬೆಟ್ಟು ನಿವಾಸಿಗಳಾದ ಪ್ರಶಾಂತ ಪೂಜಾರಿ ಹಾಗೂ ಅಶೋಕ್ ಪೂಜಾರಿ ಎಂಬವರು ಬಂಧಿತರು. ಇವರಿಂದ 1 ಸಿಂಗಲ್ ಬ್ಯಾರಲ್ ನಾಡ ಬಂದೂಕು,21 ಜೀವಂತ ಕಾಡತೂಸುಗಳು, 1 ಸರ್ಚ್ಲೈಟ್, 2 ಮೊಬೈಲ್ ಹಾಗೂ ಕಾರು ಮತ್ತು ರಿಕ್ಷಾ ವಶಪಡಿಸಿಕೊಳ್ಳಲಾಗಿದೆ. ಬಂಧಿತರ ಪೈಕಿ ಪ್ರಶಾಂತ ಪೂಜಾರಿ ಬೋರ್ ವೆಲ್ ಏಜೆಂಟ್ ಆಗಿದ್ದು, ಅಶೋಕ್ ಪೂಜಾರಿ ಆಟೋ ಚಾಲಕನಾಗಿ ದುಡಿಯುತ್ತಿದ್ದು, ಇವರಿಬ್ಬರು ಕಾಡುಪ್ರಾಣಿಗಳನ್ನು ಬೇಟೆಯಾಡಿ ಮಾಂಸವನ್ನು ಹೋಟೇಲ್, ಬಾರ್ ಗಳಿಗೆ ಪೂರೈಕೆ ಮಾಡುತ್ತಿದ್ದರು ಎನ್ನುವ ಮಾಹಿತಿ ಲಭಿಸಿದೆ.
ವನ್ಯಮೃಗ ಬೇಟೆ ದಂಧೆಯ ಹಿಂದೆ ವ್ಯವಸ್ಥಿತ ಜಾಲ?
ಪಶ್ಚಿಮಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಹಂದಿ, ಕಡವೆ, ಬರ್ಕ, ಮುಳ್ಳು ಹಂದಿ, ಮೊಲ, ಜಿಂಕೆಗಳು ಹೇರಳವಾಗಿದ್ದು, ಇವುಗಳ ಮಾಂಸಕ್ಕೆ ಭಾರೀ ಬೇಡಿಕೆಯಿರುವ ಹಿನ್ನಲೆಯಲ್ಲಿ ಕಾಡುಪ್ರಾಣಿ ಬೇಟೆಯಾಡಿ ಅವುಗಳ ಮಾಂಸ ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುವ ದಂಧೆ ಮಾಡಿಕೊಂಡಿರುವ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಈ ನಡುವೆ ಹೊರ ಜಿಲ್ಲೆಗಳಾದ ಮಂಗಳೂರು, ಉತ್ತರ ಕನ್ನಡದ ಜಿಲ್ಲೆಗಳಿಗೂ ಅಕ್ರಮ ಕಾಡುಪ್ರಾಣಿ ಬೇಟೆಯ ವಿಚಾರದಲ್ಲಿ ಸಂಪರ್ಕ ಜಾಲ ಸಕ್ರೀಯವಾಗಿದೆ ಎನ್ನಲಾಗುತ್ತಿದ್ದು,ಈ ನಿಟ್ಟಿನಲ್ಲಿ ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದ್ದಲ್ಲಿ ಈ ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆಗಳಿವೆ.