ಕಾರ್ಕಳ, ಅ.06: ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಉಡುಪಿ ಇದರ ಕಾರ್ಕಳ ಶಾಖೆಯ ನೂತನ ಸ್ವಂತ ಕಚೇರಿಯು ಕಾರ್ಕಳ ಮಾರಿಗುಡಿ ದೇವಸ್ಥಾನದ ಬಳಿಯ ಪ್ರೈಮ್ ಸಿಟಿ ಸೆಂಟರ್ ನಲ್ಲಿ ನಾಳೆ (ಅ.7) ಬೆಳಿಗ್ಗೆ 10 ಗಂಟೆಗೆ ಶುಭಾರಂಭಗೊಳ್ಳಲಿದೆ ಎಂದು ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ ಅವರು ತಿಳಿಸಿದ್ದಾರೆ.
ಈ ಕುರಿತು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯಾದ್ಯಂತ ನೆಲೆಸಿರುವ ಕ್ಷೌರಿಕರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ 2007ರಲ್ಲಿ ಸವಿತಾ ಸಮಾಜ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಸಂಘವನ್ನು ಪ್ರಾರಂಭಿಸಲಾಯಿತು. ಪ್ರಸ್ತುತ ನಮ್ಮ ಸಂಘವು 5 ಶಾಖೆಗಳನ್ನು ಹೊಂದಿದ್ದು, ಉಡುಪಿ ಅಂಬಲಪಾಡಿಯಲ್ಲಿ ಪ್ರಧಾನ ಕಚೇರಿ ಹಾಗೂ ಕಾರ್ಕಳ, ಕುಂದಾಪುರ ಮತ್ತು ಕಾಪು, ಬ್ರಹ್ಮಾವರದಲ್ಲಿ ಶಾಖೆಗಳನ್ನು ಹೊಂದಿದೆ ಎಂದರು. ಈ ಶಾಖೆಗಳಲ್ಲಿ ಬ್ಯಾಂಕಿಗ್ ಸೌಲಭ್ಯ ಇರುವ ಜೊತೆಗೆ ಸೆಲೂನ್ ಸಾಮಾಗ್ರಿಗಳನ್ನು ಒದಗಿಸಲಾಗುತ್ತಿದೆ. ಅಮ್ಮುಂಜೆಯಲ್ಲಿ ಟಿಶ್ಯು ಪೇಪರ್ ಉತ್ಪಾದನಾ ಘಟಕ ಮತ್ತು ಅಂಬಲಪಾಡಿಯಲ್ಲಿ ಸವಿತಾ ಡಯಾಗ್ನೋಸ್ಟಿಕ್ ಸೆಂಟರ್ ಆರಂಭಿಸಲಾಗಿದ್ದು,ಇವೆರಡೂ ಸಂಸ್ಥೆಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ಕಾರ್ಕಳದಲ್ಲಿ ಆರಂಭಿಸಲಾಗುವ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನೂತನ ಕಚೇರಿಯನ್ನು ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ ಉದ್ಘಾಟಿಸಲಿದ್ದಾರೆ.
ಸಮಾರಂಭದ ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ನವೀನ್ ಚಂದ್ರ ಭಂಡಾರಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ನಿರ್ದೇಶಕರಾದ ಮಂಜುನಾಥ್ ಎಸ್.ಕೆ, ಉದಯಕೃಷ್ಣಯ್ಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ, ಬಾರ್ಕೂರು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಹಾಗೂ
ಭಂಡಾರಿ ಮಹಾ ಮಂಡಲದ ಪ್ರದಾನ ಕಾರ್ಯದರ್ಶಿ ಶೇಖರ ಭಂಡಾರಿ, ಉಡುಪಿ ಹರ್ಷಭಾರತಿ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ಹರೀಶ್ ಸುವರ್ಣ, ಕಾರ್ಕಳ ಪವರ್ ಪಾಯಿಂಟ್ ಬ್ಯಾಗ್ಸ್ ಮಾಲಕ ಮಹಾವೀರ ಹೆಗ್ಡೆ, ದ.ಕ ಮತ್ತು ಉಡುಪಿ ಜಿಲ್ಲೆ ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್, ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ರಾಜು ಸಿ.ಭಂಡಾರಿ, ಕಾರ್ಕಳ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ನಾಗೇಶ್ ಭಂಡಾರಿ ಉಪಸ್ಥಿತರಿರಲಿದ್ದಾರೆ.
ಸುದ್ದಿ ಗೋಷ್ಟಿಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಾಲತಿ ಅಶೋಕ್ ಭಂಡಾರಿ, ಉಪಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ, ನಿರ್ದೇಶಕರಾದ ಸದಾಶಿವ ಬಂಗೇರ ಕುರ್ಕಾಲು, ವಿಶ್ವನಾಥ್ ಭಂಡಾರಿ ನಿಂಜೂರು, ನಾಗೇಶ್ ಭಂಡಾರಿ ಬಜಗೋಳಿ, ರಾಜು ಸಿ. ಭಂಡಾರಿ ಕಿನ್ನಿಮುಲ್ಕಿ ಉಪಸ್ಥಿತರಿದ್ದರು.