
ವಾಷಿಂಗ್ಟನ್: ಭಾರತ ರಷ್ಯಾದ ಕಚ್ಚಾತೈಲವನ್ನು ಖರೀದಿಸುತ್ತಿದೆ ಎಂದು ಆರೋಪಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ಅಮೆರಿಕಗೆ ರಫ್ತಾಗುವ ವಸ್ತುಗಳ ಮೇಲೆ ಶೇ.50% ಸುಂಕ ವಿಧಿಸಿದ್ದರು. ಇದೀಗ ಸುಂಕ ಕಡಿಮೆ ಮಾಡಲು ಟ್ರಂಪ್ ಮುಂದಾಗಿದ್ದು, ಭಾರತದ ಮೇಲಿನ ಸುಂಕವನ್ನು ಕಡಿಮೆ ಮಾಡುವುದಾಗಿ ಹೇಳಿದ್ದಾರೆ.
ಓವಲ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಭಾರತದೊಂದಿಗಿನ ವ್ಯಾಪಾರ ಮಾತುಕತೆಗಳ ಕುರಿತು ಟ್ರಂಪ್ ಮಾತನಾಡಿ”ಭಾರತದ ಮೇಲಿನ ಸುಂಕಗಳು ರಷ್ಯಾದ ತೈಲ ವ್ಯಾಪಾರದ ಕಾರಣದಿಂದಾಗಿ ತುಂಬಾ ಹೆಚ್ಚಿಸಿದ್ದೆವು, ಆದರೆ ಭಾರತ ರಷ್ಯಾದ ತೈಲ ಖರೀದಿಯನ್ನು ಗಣನೀಯವಾಗಿ ನಿಲ್ಲಿಸಿದ್ದಾರೆ ಹಾಗಾಗಿ ನಾವು ಸುಂಕವನ್ನು ಕಡಿಮೆ ಮಾಡಲಿದ್ದೇವೆ… ಒಂದು ಹಂತದಲ್ಲಿ, ನಾವು ಅದನ್ನು ಕಡಿಮೆ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.
ಅಲ್ಲದೆ, ನಾವು ಭಾರತದೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ. ಇದು ಹಿಂದಿನ ಒಪ್ಪಂದಗಳಿಗಿಂತ ಭಿನ್ನವಾಗಿರಲಿದೆ. ಈಗ ಅವರು ನನ್ನನ್ನು ಇಷ್ಟಪಡದೇ ಇರಬಹುದು, ಆದರೆ ಮುಂದೆ ಇಷ್ಟ ಪಡುತ್ತಾರೆ ಎಂದಿರುವ ಟ್ರಂಪ್ ನಮ್ಮ ಹಿಂದಿನ ಒಪ್ಪಂದಗಳು ನ್ಯಾಯಯುತವಾಗಿರಲಿಲ್ಲ.ಆದರೆ ಈಗ ನಾವು ನ್ಯಾಯಯುತವಾದ ಒಪ್ಪಂದಗಳನ್ನು ಮಾಡಿಕೊಳ್ಳಲಿದ್ದೇವೆ ಅದು ಬಹಳ ಶೀಘ್ರವೇ ಆಗಲಿದೆ ಎಂದು ಹೇಳಿದ್ದಾರೆ.

