ಉಡುಪಿ: ದನದ ಬಾಲವೊಂದು ತುಂಡಾಗಿ ಬಿದ್ದಿರುವ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ.
ರಾಘವೇಂದ್ರ ಸಿ ಪೊಲೀಸ್ ಉಪನಿರೀಕ್ಷಕರು ಕೋಟ ಪೊಲೀಸ್ ಠಾಣೆ ಇವರಿಗೆ ಕರೆ ಮಾಡಿ ನಿನ್ನೆಯಿಂದ ಟಿವಿ, ಪತ್ರಿಕೆ ಹಾಗೂ ಕೆಲವರ ವಾಟ್ಸಾಫ್ ಗ್ರೂಫ್ ಗಳಲ್ಲಿ ಬ್ರಹ್ಮಾವರದ ಗುಂಡ್ಮಿ ಗ್ರಾಮದ ಭಗವತಿ ರಸ್ತೆಯಲ್ಲಿರುವ ನಾಗೇಶ ರವರ ಮನೆಯ ದನದ ಕರುವಿನ ಬಾಲದ ತುದಿಯನ್ನು ಯಾರೋ ಮತಾಂಧರು ಕತ್ತರಿಸಿ ಹೋಗಿರುವ ಬಗ್ಗೆ ಮೇಸೆಜ್ ಹರಿದಾಡುತ್ತಿದೆ ಎಂದು ಮಾಹಿತಿ ತಿಳಿಸಿರುತ್ತಾರೆ.
ಅದರ ಬಗ್ಗೆ ವಿಚಾರಿಸಿದಾಗ ದಿನಾಂಕ: 28.01.2025 ರಂದು ಮಧ್ಯಾಹ್ನ 2:00 ಗಂಟೆಗೆ ನಾಗೇಶ ಹಾಗೂ ಅವರ ಹೆಂಡತಿ ಅಹಲ್ಯ ರವರು ಮನೆಯಲ್ಲಿರುವಾಗ ಅಪರಿಚಿತ ಸುಮಾರು 60 ವರ್ಷ ಪ್ರಾಯದ ಗಂಡಸು ದನ ಸಹಾಯ ಮಾಡುವಂತೆ ಅವರ ಮನೆಗೆ ಬಂದಿದ್ದು ಅವರು ಹಣ ಕೊಡದೇ ಇದ್ದು ಆಗ ಆ ವ್ಯಕ್ತಿಯ ಮನೆಯಿಂದ ಹೋಗಿರುತ್ತಾನೆ. ಅದೇ ದಿನ ಸಂಜೆ 4:00 ಗಂಟೆಗೆ ನಾಗೇಶ ರವರು ದನದ ಹಾಲು ಕರೆಯಲು ಕೊಟ್ಟಿಗೆಗೆ ಹೋದಾಗ ದನ ನಿಂತುಕೊಂಡಿದ್ದು ಮಲಗಿದ್ದ ಕರುವಿನ ಬಾಲದ ಮೇಲೆ ದನದ ಕಾಲು ಇದ್ದು ಕರುವು ಎದ್ದಾಗ ಬಾಲ ತುಂಡಾಗಿ ಬಿದ್ದಿರುತ್ತದೆ.ಈ ವಿಷಯವನ್ನು ಅದೇ ದಿನ ರಾತ್ರಿ ಸಮಯ ಸುಮಾರು 8:00 ಗಂಟೆಗೆ ನಾಗೇಶ ರವರ ಮಗ ಅನಿಲ ರವರಿಗೆ ತಿಳಿದಾಗ, ಅವರು ಇದರ ವಾಸ್ತವವನ್ನು ಸರಿಯಾಗಿ ಅರಿಯದೇ ಇನ್ನೂ ಕೆಲವರು ಸೇರಿ ಈ ವಿಷಯವನ್ನು ತಿರುಚಿ ಯಾರೋ ಮತಾಂಧ ಸೇಲ್ಸ್ ಮೆನ್ ತಮ್ಮ ಮನೆಗೆ ಮಧ್ಯಾಹ್ನ ಬಂದು ದನದ ಕರುವಿನ ಬಾಲವನ್ನು ಕತ್ತರಿಸಿರುವುದಾಗಿ ಸುದ್ದಿಯನ್ನು ಹಬ್ಬಿಸಿ ಕರುವಿನ ತುಂಡಾದ ಬಾಲದ ಪೋಟೋವನ್ನು ಕಳುಹಿಸಿರುತ್ತಾರೆ.
ಅನಿಲ್ ಮತ್ತು ಇತರರು ವಾಸ್ತವಿಕ ಸಂಗತಿಗಳನ್ನು ತಿರುಚಿ ಸಾಮಾಜಿಕ ಸಾಮರಸ್ಯವನ್ನು ಹಾಳುಗೆಡುವುದಕ್ಕೆ ಮತ್ತು ಆತಂಕದ ವಾತಾವರಣ ನಿರ್ಮಾಣ ಆಗುವಂತೆ ಸುಳ್ಳು ಸುದ್ದಿ ಸೃಷ್ಟಿಸಿ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಲ್ಲಿ ಬಿತ್ತರವಾಗುವಂತೆ ಮಾಡಿರುತ್ತಾರೆ. ಸಮಾಜದಲ್ಲಿ ಗುಂಪುಗಳ ನಡುವೆ ದ್ವೇಷ ಹುಟ್ಟಿಸಿ ಅಶಾಂತಿ ನಿರ್ಮಾಣ ಮಾಡುವಂತೆ ಮಾಡಿರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 19/2025 ಕಲಂ: 353(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.