ಉಡುಪಿ : ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಕರ್ನಾಟಕ ಉಚ್ಛ ನ್ಯಾಯಾಲಯ ಎತ್ತಿ ಹಿಡಿದು ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ನೀಡಿ ಕಾನೂನಾತ್ಮಕ ತನಿಖೆಗೆ ಸಹಕರಿಸಬೇಕು. ಸಿದ್ದರಾಮಯ್ಯ ರಾಜೀನಾಮೆ ಅಗ್ರಹಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ತನಕ ಬಿಜೆಪಿಯ ಹೋರಾಟ ನಿಲ್ಲದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಎಚ್ಚರಿಸಿದ್ದಾರೆ.
ಅವರು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕಚೇರಿಯ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಆಗ್ರಹಿಸಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.
ತಾನು ಯಾವುದೇ ಕಪ್ಪು ಚುಕ್ಕೆ ಇಲ್ಲದ ರಾಜಕಾರಣಿ ಎನ್ನುತ್ತಾ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ ಇದೀಗ ಇರುವ ಅವಕಾಶವನ್ನು ಬಳಸಿಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿ ನೈತಿಕತೆಯನ್ನು ಉಳಿಸಿಕೊಳ್ಳಬೇಕು. ತಪ್ಪಿದಲ್ಲಿ ರಾಜ್ಯದ ಜನತೆ ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ನಾಡಿನ ಜನತೆಗೆ ಆದರ್ಶಪ್ರಾಯವಾಗಬೇಕಿದ್ದ ಓರ್ವ ಮುಖ್ಯಮಂತ್ರಿ ಮುಡಾ ಸಹಿತ ಹಲವಾರು ಹಗರಣಗಳಲ್ಲಿ ಭಾಗಿಯಾಗಿ ತನಿಖೆ ಎದುರಿಸುತ್ತಿರುವುದು ರಾಜ್ಯದ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಷ್ಟೇ ಕಸರತ್ತು ನಡೆಸಿದರೂ ಈ ಪ್ರಕರಣಗಳಿಂದ ಹೊರಗೆ ಬರಲು ಸಾಧ್ಯವಾಗದು. ಜನತೆಯಿಂದ ಅಪಹಾಸ್ಯಕ್ಕೆ ಈಡಾಗುವ ಬದಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಉಚ್ಛ ನ್ಯಾಯಾಲಯದ ತೀರ್ಪನ್ನು ಗೌರವಿಸಿ, ತನ್ನ ಸ್ಥಾನಕ್ಕೆ ತಕ್ಷಣ ರಾಜೀನಾಮೆಯನ್ನು ನೀಡಿ ರಾಜ್ಯದ ಜನತೆಯ ಗೌರವವನ್ನು ಉಳಿಸಬೇಕು ಎಂದು ಬಿಜೆಪಿ ಉಡುಪಿ ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ದೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಪ್ರಮುಖರಾದ ದಿನಕರ ಶೆಟ್ಟಿ ಹೆರ್ಗ, ರೇಶ್ಮಾ ಉದಯ ಶೆಟ್ಟಿ, ಶಿಲ್ಪಾ ಜಿ. ಸುವರ್ಣ, ರಾಜೇಶ್ ಕಾವೇರಿ, ಶ್ರೀಶ ನಾಯಕ್ ಪೆರ್ಣಂಕಿಲ, ಪ್ರಕಾಶ್ ಶೆಟ್ಟಿ ಪಾದೇಬೆಟ್ಟು, ವಿಜಯ ಕೊಡವೂರು, ಸಂಧ್ಯಾ ರಮೇಶ್, ವಿಟ್ಠಲ ಪೂಜಾರಿ, ಶ್ಯಾಮಲಾ ಕುಂದರ್, ನಯನಾ ಗಣೇಶ್, ಸತ್ಯಾನಂದ ನಾಯಕ್, ಶಿವಕುಮಾರ್ ಅಂಬಲಪಾಡಿ, ಶ್ರೀನಿಧಿ ಹೆಗ್ಡೆ, ಅನಿತಾ ಶ್ರೀಧರ್, ರಾಘವೇಂದ್ರ ಕುಂದರ್, ಶ್ರೀಕಾಂತ್ ನಾಯಕ್, ದಿನೇಶ್ ಅಮೀನ್, ದೀಪಕ್ ಕುಮಾರ್ ಶೆಟ್ಟಿ, ಜಿತೇಂದ್ರ ಶೆಟ್ಟಿ, ರಾಜೀವ್ ಕುಲಾಲ್, ರವಿ ಅಮೀನ್, ರಾಘವೇಂದ್ರ ಉಪ್ಪೂರು, ಜಗದೀಶ್ ಆಚಾರ್ಯ ಕಪ್ಪೆಟ್ಟು, ಗೋಪಾಲಕೃಷ್ಣ ರಾವ್, ಸಚಿನ್ ಪೂಜಾರಿ, ಶೈಲೇಂದ್ರ ಶೆಟ್ಟಿ, ದಿಲ್ಲೇಶ್ ಶೆಟ್ಟಿ, ಸದಾನಂದ ಪ್ರಭು, ಅರುಣ್ ಬಾಣ, ಪುಷ್ಪರಾಜ್ ಶೆಟ್ಟಿ, ಡಾ! ವಿದ್ಯಾಧರ್ ಶೆಟ್ಟಿ, ಗಿರಿಧರ್ ಆಚಾರ್ಯ, ನಿತಿನ್ ಪೈ, ಜಯಕರ್, ಸಂತೋಷ್ ಆಚಾರ್ಯ, ದಯಾಶಿನಿ, ಶಾಂತಿ ಮನೋಜ್, ಪ್ರಜ್ಞಾ ಶೆಟ್ಟಿ, ಸುಧಾ ಪೈ, ಯಶೋದಾ, ಮಂಜುಳಾ ಶೆಟ್ಟಿ ಹಾಗೂ ವಿವಿಧ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
in