
ಉಡುಪಿ: ಶಿಕ್ಷಣವು ದೇಶದ ಬದಲಾವಣೆಯ ಬಹುಮುಖ್ಯ ಅಸ್ತ್ರ. ದೇಶದ ಭವಿಷ್ಯವೇ ವಿದ್ಯಾರ್ಥಿಗಳು. ಅಂತಹ ಶ್ರೇಷ್ಠ ವಿದ್ಯಾರ್ಥಿಗಳನ್ನು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಈ ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದೆ. ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರ ಬದ್ಧತೆ, ಕಾಯಕನಿಷ್ಠೆ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ. ಇಂತಹ ಸಂಸ್ಥೆ ನನ್ನ ಕ್ಷೇತ್ರದಲ್ಲಿರುವುದು ನನ್ನ ಹೆಮ್ಮೆ. ಈ ಸಂಸ್ಥೆಯಿಂದ ಇನ್ನಷ್ಟು ಸಾಧಕರು ಮೂಡಿಬರಲಿ ಎಂದು ಉಡುಪಿಯ ಶಾಸಕರಾದ ಯಶ್‌ಪಾಲ್ ಸುವರ್ಣ ಅಭಿಪ್ರಾಯಪಟ್ಟರು.
ಅವರು ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ “ಉಡುಪಿ ಜ್ಞಾನ ಸಂಭ್ರಮ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರ
ಈ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಉಜ್ವಲ್ ಕನ್ಸ್ಟ್ರಕ್ಷನ್ಸ್ ಮತ್ತು ಡೆವಲರ್ಸ್ ಆದ ಪುರುಶೋತ್ತಮ್ ಪಿ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ ಮಾತನಾಡಿ, ಕಲಿಸುವ ಮಕ್ಕಳ ಮೊಗದ ನಗುವೆ ತಮ್ಮ ಆಸ್ತಿ ಎಂಬ ಭಾವನೆ ಶಿಕ್ಷಕರಲ್ಲಿರಲಿ. ನಮ್ಮ ಸುಖ ಬೇರೆಯವರ ದುಃಖಕ್ಕೆ ಕಾರಣವಾಗದಿರಲಿ. ಜನ್ಮದಾತರ ಸಂತೋಷಕ್ಕೆ ಕಾರಣರಾಗಿ ಮತ್ತು ಸಮಯದ ಜೊತೆಗೆ ಸಾಗಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ 2024-25ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯ ಸಾಧಕರು, ಕೆ.ಸಿ.ಟಿ. ಪರೀಕ್ಷೆಯಲ್ಲಿ ಸಾವಿರದೊಳಗಿನ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿಗಳು, ನೀಟ್ ಪರೀಕ್ಷೆಯಲ್ಲಿ 500 ಅಂಕಗಳಿಗಿಂತ ಅಧಿಕ ಪಡೆದ ಸಾಧಕರು, ಕ್ರೀಡಾಕ್ಷೇತ್ರದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಮತ್ತು ಸಾಂಸ್ಕೃತಿಕ ಸಾಧಕರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ, ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ, ಉಡುಪಿ ಜ್ಞಾನಸುಧಾ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್, ಉಪಪ್ರಾಂಶುಪಾಲರಾದ ಪ್ರಕಾಶ್ ಜೋಗಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್ ಅಕಾಡೆಮಿಕ್ಸ್ ಡಾ. ಮಿಥುನ್ ಯು, ವಿದ್ಯಾರ್ಥಿ ನಾಯಕ, ನಾಯಕಿಯರಾದ ಆರ್ಯ ಎಂ ಮತ್ತು ಆರ್ನವಿ ಮತ್ತಿತರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಡುಪಿ ಜ್ಞಾನಸುಧಾ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಉಪಪ್ರಾಂಶುಪಾಲರಾದ ಪ್ರಕಾಶ್ ಜೋಗಿ ವಂದಿಸಿ, ಶ್ರೀಮತಿ ಜೋತ್ಸ್ನಾ ಕಾರ್ಯಕ್ರಮ ನಿರೂಪಿಸಿದರು.
