Share this news

ಉಡುಪಿ: ಮತ್ತೋರ್ವರ ಜೀವ ಉಳಿಸಲು ಹೋಗಿ ಮಹಿಳೆಯೋರ್ವರು ತನ್ನ ಪ್ರಾಣವನ್ನೇ ತೆತ್ತ ಹೃದಯವಿದ್ರಾವಕ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಟೇಶ್ವರದಲ್ಲಿ ನಡೆದಿದೆ. ಅರ್ಚನಾ ಕಾಮತ್ (34) ಮೃತಪಟ್ಟವರು. 69 ವರ್ಷ ಹಿರಿಯ ಸಂಬಂಧಿಕ ಮಹಿಳೆಗೆ ಯಕೃತ್ತಿನ (Liver) ಕಸಿಗೆ ದಾನಿಯಾಗಲು ಬಯಸಿದ್ದ 34 ವರ್ಷದ ಅರ್ಚನಾ ಕಾಮತ್ ಅವರು ಯಕೃತ್ ದಾನ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಸೋಂಕಿಗೆ ತುತ್ತಾಗಿ ಜೀವ ಕಳೆದುಕೊಂಡಿದ್ದಾರೆ.

ಸದಾ ಸಮಾಜಮುಖಿ ಚಿಂತನೆಯೊಂದಿಗೆ ಸಕ್ರಿಯವಾಗಿದ್ದ ಅರ್ಚನಾ ಕಾಮತ್ ಅವರು ನಗರದ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದರು. ತಮ್ಮ ಯಕೃತ್‌ನ ಒಂದು ಭಾಗವನ್ನು ಪತಿಯ ಸಂಬಂಧಿಗೆ ದಾನ ಮಾಡಿ ಇಹಲೋಕ ತ್ಯಜಿಸಿದ್ದಾರೆ. ಅಕಾಲಿಕ ನಿಧನದಿಂದ ಅರ್ಚನಾ ಅವರ ಸಂಬಂಧಿಕರು, ಆತ್ಮೀಯರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಮೃತರು ಪತಿ ಸಿಎ ಚೇತನ ಕಾಮತ್, 4 ವರ್ಷದ ಮಗು, ತಂದೆ, ತಾಯಿಯನ್ನು ಅಗಲಿದ್ದಾರೆ.

ತನ್ನ ಪತಿಯ ಸಂಬಂಧಿ ಮಹಿಳೆಯು ಅನಾರೋಗ್ಯದಲ್ಲಿದ್ದು, ಅವರಿಗೆ ಲಿವರ್‌ನ ಅಗತ್ಯವಿತ್ತು ಎನ್ನಲಾಗಿದೆ. ಹಲವರನ್ನು ತಪಾಸಣೆಗೆ ಒಳಪಡಿಸಿದ್ದರೂ ಕೂಡ ರಕ್ತದ ಗುಂಪು ಹೊಂದಾಣಿಕೆಯಾಗಿರಲಿಲ್ಲ. ಆದರೆ ಉಪನ್ಯಾಸಕಿ ಅರ್ಚನಾರ ರಕ್ತದ ಗುಂಪು ಹೊಂದಾಣಿಕೆಯಾಗಿತ್ತು. ಹಾಗಾಗಿ ಅರ್ಚನಾ ಲಿವರ್ ಭಾಗದ ದಾನಕ್ಕೆ ಒಪ್ಪಿದ್ದರು. ಅದರಂತೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಅರ್ಚನಾರ ಲಿವರ್‌ನ ಭಾಗಶಃ ಭಾಗ ತೆಗೆದು ಸಂಬಂಧಿ ಮಹಿಳೆಗೆ ಜೋಡಿಸುವ ಶಸ್ತಚಿಕಿತ್ಸೆ ನಡೆದಿತ್ತು. ಅಲ್ಲದೆ ಆರೋಗ್ಯದಿಂದಿದ್ದ ಅರ್ಚನಾ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು.

ನಾಲ್ಕು ದಿನಗಳ ಹಿಂದೆ ಅರ್ಚನಾ ಏಕಾಏಕಿ ಅಸ್ವಸ್ಥಗೊಂಡಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ರವಿವಾರ ಅರ್ಚನಾ ಮೃತಪಟ್ಟಿದ್ದಾರೆ.

                       in 

                          

                        

                       

Leave a Reply

Your email address will not be published. Required fields are marked *