Share this news

ಉಡುಪಿ: ಬುದ್ಧಿವಂತರ ಜಿಲ್ಲೆ ಎಂದು ಕರೆಯಲ್ಪಡುವ ಉಡುಪಿ ಜಿಲ್ಲೆಯಲ್ಲೇ ವಿದ್ಯಾರ್ಥಿಯೊಬ್ಬ ಜನರಿಗೆ ಮಕ್ಮಲ್ ಟೋಪಿ ಹಾಕಿದ್ದು ಇದೀಗ ಆತನ ಬಂಡವಾಳ ಬಟಾಬಯಲಾಗಿದೆ. ಶಿಕ್ಷಕಿ ಮತ್ತು ಸರ್ಕಾರಿ ಅಧಿಕಾರಿಯ ಮಗನೇ ಈ ಕೆಲಸ ಮಾಡಿದ್ದು, ಜಿಲ್ಲೆಗೆ ತಾನೇ ಟಾಪರ್ ಎಂದು ನಕಲಿ ಮಾಡಿದವನ ಅಸಲಿ ಮುಖ ಇದೀಗ ಬಯಲಾಗಿದೆ.

ವೈದ್ಯಕೀಯ ಪ್ರವೇಶಕ್ಕೆ ನಡೆಯುವ ನೀಟ್ ಪರೀಕ್ಷೆಯ ಫಲಿತಾಂಶ ಇತ್ತೀಚೆಗೆ ಪ್ರಕಟಗೊಂಡಿತ್ತು. ಹಲವು ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮದಿಂದ ನೀಟ್ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಆದರೆ ಉಡುಪಿಯ ಈ ರೋನಕ್ ಶೆಟ್ಟಿ ನಕಲಿ ಅಂಕ ಪಟ್ಟಿ ಸಿದ್ಧಪಡಿಸುವ ಮೂಲಕ ನಾನೇ ಟಾಪರ್ ಎಂದು ಹೇಳಿಕೊಂಡು ಇಡೀ ಊರಿಗೆ ಯಾಮಾರಿಸಿದ್ದಾನೆ. ನೀಟ್ ಫಲಿತಾಂಶದಲ್ಲಿ ಉಡುಪಿಯ ರೋನಕ್ ಶೆಟ್ಟಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯ ಮಟ್ಟದಲ್ಲಿ ಎಂಟನೇ ಸ್ಥಾನ ಎಂದು ಹೇಳಲಾಗಿತ್ತು. ಈತನ ಸಾಧನೆ ಬಗ್ಗೆ ಇತರ ವಿದ್ಯಾರ್ಥಿಗಳಿಗೆ ಸಂಶಯ ಬಂದು ಪರಿಸೀಲಿಸಿದಾಗ ಆತನ ಅಸಲಿಯತ್ತು ಬಯಲಾಗಿದೆ.
ರೋನಕ್ ಶೆಟ್ಟಿ ಅಸಲಿ ಅಂಕಪಟ್ಟಿಯಲ್ಲಿ 65 ಅಂಕ ಎಂದಿದ್ದು, ನಕಲಿ ಪಟ್ಟಿಯಲ್ಲಿ 646 ಎಂದಿದೆ. ನಕಲಿ ಪ್ರಮಾಣ ಪತ್ರದ ಅಕ್ಷರಗಳು ಸಂಪೂರ್ಣ ಅದಲು ಬದಲಾಗಿದ್ದು, 2024ರ ಅಂಕಪಟ್ಟಿಗೆ ಅಂಕಗಳನ್ನು ಸೇರಿಸಲಾಗಿದೆ. ಎರಡೂ ಅಂಕಪಟ್ಟಿಯನ್ನು ತಾಳೆಹಾಕಿ ನೋಡಿದಾಗ ನಕಲಿ ಎಂಬುದು ಬಯಲಿಗೆ ಬಂದಿದೆ.

ಮುಖ್ಯವಾಗಿ ಪರೀಕ್ಷಾ ನಿರ್ದೇಶಕರ ಬದಲಾಗಿ ಹಿರಿಯ ನಿರ್ದೇಶಕರ ಸಹಿ ಹಾಕಲಾಗಿದೆ. ಮೂಲ ದಾಖಲೆಯಲ್ಲಿ ಎರಡು ಪುಟಗಳಿದ್ದರೆ ನಕಲಿಯಲ್ಲಿ ಒಂದೇ ಪುಟವಿದೆ. ಅಭ್ಯರ್ಥಿಯ ಭಾವಚಿತ್ರದಲ್ಲೂ ವ್ಯತ್ಯಾಸವಿದೆ. ಕಟ್‌ಆಫ್ ಸ್ಕೋರ್ ಹಾಗೂ ಒಟ್ಟು ಅಭ್ಯರ್ಥಿಗಳ ಸಂಖ್ಯೆಯಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ನೀಟ್‌ನಲ್ಲಿ ಇಡೀ ದೇಶಕ್ಕೆ 107ನೇ ರ‍್ಯಾಂಕ್ ಎಂದು ಬಿಂಬಿಸಿದ್ದ ರೋನಕ್‌ಗೆ ನಿಜವಾಗಿ ಬಂದಿದ್ದು 17,62,258 ರ‍್ಯಾಂಕ್. 107 ನೇ ರ‍್ಯಾಂಕ್ ಹೊಸದಿಲ್ಲಿ ಮೂಲದ ವಿದ್ಯಾರ್ಥಿನಿಯೊಬ್ಬರು ಪಡೆದುಕೊಂಡಿದ್ದಾರೆ.

ಇನ್ನು ಇದೇ ರೀತಿ ನಕಲಿ ಅಂಕಪಟ್ಟಿ ಸೃಷ್ಟಿಸಿ ವಿದ್ಯಾ ಸಂಸ್ಥೆಗಳಿಗೆ ಮೋಸ ಮಾಡುವ ಮತ್ತು ವೈದ್ಯಕೀಯದಂತಹ ಸೀಟುಗಳನ್ನು ಸುಲಭವಾಗಿ ಪಡೆಯಲು ಅಡ್ಡದಾರಿ ಹಿಡಿಯಲು ಯತ್ನಿಸಿದವರ ಬಗ್ಗೆ ಸಮಗ್ರ ತನಿಖೆ ಆಗಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 

 

 

 

 

 

Leave a Reply

Your email address will not be published. Required fields are marked *