ಲಖನೌ: ಉತ್ತರಾಖಂಡದ ಹಲ್ದ್ವಾನಿ ಪಟ್ಟಣದಲ್ಲಿ ಗುರುವಾರ ನಡೆದ ಭೀಕರ ಹಿಂಸಾಚಾರದ ಮಾಸ್ಟರ್ ಮೈಂಡ್ ಅಬ್ದುಲ್ ಮಲಿಕ್‌ನನ್ನು ಉತ್ತರಾಖಂಡ ಪೊಲೀಸರು ಭಾನುವಾರ ದೆಹಲಿಯಲ್ಲಿ ಬಂಧಿಸಿದ್ದಾರೆ. ಹಲ್ದ್ವಾನಿಯ ಬನ್ಭೂಲ್ಪುರದಲ್ಲಿ ಅಕ್ರಮವಾಗಿ ಕಟ್ಟಲಾಗಿದ್ದ ಮದರಸಾ ಮತ್ತು ಮಸೀದಿಯನ್ನು ಬುಲ್ಡೋಜರ್‌ನಿಂದ ತೆರವುಗೊಳಿಸಿದ ಬೆನ್ನೆಲ್ಲೇ ಪ್ರತಿಭಟನಾಕಾರರು ಬೀದಿಗಿಳಿದು ಕಂಡಕಂಡ ವಾಹನಗಳಿಗೆ ಬೆಂಕಿಹಚ್ಚಿದ ಪರಿಣಾಮ ಭಾರೀ ಹಿಂಸಾಚಾರ ಭುಗಿಲೆದ್ದಿತ್ತು.ಈ ಹಿಂಸಾಚಾರದಲ್ಲಿ ಈವರೆಗೆ 78 ಜನರನ್ನ ಬಂಧಿಸಲಾಗಿದೆ.
ಸುಳ್ಳು ಅಫಿಡವಿಟ್ ಆಧಾರದ ಮೇಲೆ ಸರ್ಕಾರಿ ಇಲಾಖೆಗಳು ಮತ್ತು ನ್ಯಾಯಾಲಯವನ್ನು ತಪ್ಪುದಾರಿಗೆಳೆಯಲು ಕ್ರಿಮಿನಲ್ ಪಿತೂರಿ ನಡೆಸಿದ ಆರೋಪವನ್ನು ಬಂಧಿತ ಆರೋಪಿಗಳ ಮೇಲೆ ಹೊರಿಸಲಾಗಿದೆ. ಮಲಿಕ್ ಮತ್ತು ಆತನ ಪುತ್ರ ಅಬ್ದುಲ್ ಮೊಯಿದ್ ವಿರುದ್ಧ ಈ ಹಿಂದೆ ಲುಕ್ ಔಟ್ ನೋಟಿಸ್ ಹೊರಡಿಸಲಾಗಿತ್ತು ಮತ್ತು ಪಟ್ಟಣದಲ್ಲಿನ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಮಲಿಕ್ ನಿರ್ಮಿಸಿದ್ದ ಅಕ್ರಮ ಮದರಸಾವನ್ನು ಪೊಲೀಸರು ತರವುಗೊಳಿಸಲು ಮುಂದಾದಾಗ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಅಕ್ರಮ ಮದರಸಾ ನೆಲಸಮಗೊಳಿಸಲು ಪುರಸಭೆಯ ಕ್ರಮವನ್ನು ಪ್ರಶ್ನಿಸಿ ಮಲಿಕ್ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದರು