ಉಡುಪಿ: ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್ ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಶ್ರೀಧರ ರಾವ್ ಇರಾ, ಕೂಡ್ಲು, ಕರ್ನಾಟಕ, ಮೂಲ್ಕಿ ಮತ್ತು ಧರ್ಮಸ್ಥಳ ಯಕ್ಷಗಾನ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ತೆಂಕುತಿಟ್ಟಿನ ಅಪ್ರತಿಮ ಸ್ತ್ರೀ ವೇಷಧಾರಿಯಾಗಿ ಕಲಾಸೇವೆ ಮಾಡಿರುವ ಅವರು ದಮಯಂತಿ, ದಾಕ್ಷಾಯಿಣಿ, ಅಮ್ಮು ಬಲ್ಲಾಳ್ತಿ, ಲಕ್ಷ್ಮೀ, ಸುಭದ್ರೆ, ಸತ್ಯಭಾಮೆ ಅಲ್ಲದೆ ಪ್ರಮೀಳೆ, ಶಶಿಪ್ರಭೆ ಮುಂತಾದ ಪಾತ್ರಗಳಿಂದ ಹೆಸರು ಮಾಡಿದವರು.
ಮಾಲಿಂಗ ಮುಕಾರಿ ಮತ್ತು ಕಾವೇರಿ ದಂಪತಿಗಳಿಗೆ ಪುತ್ರನಾಗಿ 1948ರ ಜುಲೈ.23 ರಂದು ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ನಾಯ್ಕಾಪುವಿನಲ್ಲಿ ಜನಿಸಿದರು. 1962ರಲ್ಲಿ ಕಲ್ಲಾಡಿ ಕೊರಗ ಶೆಟ್ಟರ ಯಜಮಾನಿಕೆಯ ಕುಂಡಾವು ಮೇಳಕ್ಕೆ ಶ್ರೀಧರ ರಾವ್ ಅವರು ಬಾಲಕಲಾವಿದನಾಗಿ ಸೇರಿದ್ದರು. ಬಳಿಕ ಅನೇಕ ಮೇಳಗಳಲ್ಲಿ ಕಲಾಸೇವೆ ಮಾಡಿದ ಅವರು ಯಕ್ಷಗಾನ ಕಲಾರಂಗದಲ್ಲಿ ಕುಂಬಳೆ ಶ್ರೀಧರ್ ರಾವ್ ಆಗಿ ಪ್ರಸಿದ್ದಿ ಪಡೆದರು.
ಕುಂಬಳೆ ಕಮಲಾಕ್ಷ ನಾಯಕ್ ಮತ್ತು ಚಂದು ಅವರಲ್ಲಿ ನಾಟ್ಯಾಭ್ಯಾಸ, ಉಡುಪಿ ಕಲಾ ಕೇಂದ್ರದಲ್ಲಿ ಬಡಗು ನೃತ್ಯಭ್ಯಾಸ. ಮತ್ತೆಲ್ಲಾ ಕಲಿಕೆಗಳು ರಂಗದಲ್ಲಿ ಅಭ್ಯಯಿಸಿದ್ದಾರೆ. ಇವರ ನಿಧನವು ಯಕ್ಷ ರಂಗಕ್ಕೆ ತುಂಬಲಾರದ ನಷ್ಟವಾಗಿದೆ.
