ಕಾರ್ಕಳ: ಬೈಲೂರಿನ ಉಮಿಕ್ಕಲ್ ಬೆಟ್ಟದಲ್ಲಿ ಸ್ಥಾಪನೆಯಾದ ಪರಶುರಾಮನ ಮೂರ್ತಿಯ ಅರ್ಧಭಾಗ ಕಿತ್ತು ಇನ್ನುಳಿದ ಭಾಗವನ್ನು ತೆರವುಗೊಳಿಸಲು ನಿರ್ಮಿತಿ ಕೇಂದ್ರ ಹಾಗೂ ಗುತ್ತಿಗೆದಾರರು ಹುನ್ನಾರ ನಡೆಸುತ್ತಿದ್ದು ,ಪರಶುರಾಮ ಮೂರ್ತಿಯನ್ನು ತೆರವುಗೊಳಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ,ಪರಶುರಾಮ ಮೂರ್ತಿಯ ನಿರ್ಮಾಣ ಕಾಮಗಾರಿಯ ಗುತ್ತಿಗೆ ಪಡೆದ ಕೃಷ್ಣ ನಾಯ್ಕ್ ಎಂಬವರು ಜ.9 ಮೂರ್ತಿಯ ಕಾಮಗಾರಿ ಪೂರ್ಣಗೊಳಿಸಲು ನಿರ್ಮಿತಿ ಕೇಂದ್ರದಿಂದ ಅನುಮತಿ ಕೇಳಿ ಪತ್ರ ಬರೆದಿದ್ದಾರೆ.ಆದರೆ ನಿರ್ಮಿತಿ ಕೇಂದ್ರದಿಂದ ಯಾವುದೇ ಪತ್ರ ಬರದ ಹಿನ್ನೆಲೆಯಲ್ಲಿ ಕೃಷ್ಣ ನಾಯ್ಕ್ ಅವರು ಎ 26ರಂದು ಕಾಮಗಾರಿ ಪೂರ್ಣಗೊಳಿಸಲು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ಈ ಕುರಿತು ಎರಡು ವಾರಗಳ ಕಾಲಾವಕಾಶ ನೀಡುವಂತೆ ಕೇಳಿದ್ದರು.ಇದಕ್ಕೆ ಹೈಕೋರ್ಟ್ ನೀವು ಎರಡು ವಾರಗಳಲ್ಲಿ ಏನು ಕಾಮಗಾರಿ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದು,ಇದನ್ನೇ ಆದೇಶ ಎಂದು ಸುಳ್ಳು ಹೇಳುತ್ತಿದ್ಧಾರೆ ಎಂದು ಉದಯ ಶೆಟ್ಟಿ ಆರೋಪಿಸಿದ್ದಾರೆ.
ಬೆಟ್ಟದಲ್ಲಿ ಅಸ್ಥಿಪಂಜರದಂತೆ ನಿಂತಿರುವ ಪರಶುರಾಮನ ಮೂರ್ತಿ ಇಡೀ ತುಳುನಾಡಿಗೆ ಆದ ಅವಮಾನ. ಪರಶುರಾಮನ ಸೃಷ್ಟಿಕರ್ತ ಎಂದು ಅಹಂಕಾರ ಮೆರೆದ ಸುನಿಲ್ ಕುಮಾರ್ ಅವರಿಗೆ ತಕ್ಕ ಶಿಕ್ಷೆಯಾಗಿದೆ. ಇದು ಸುನಿಲ್ ಕುಮಾರ್ ಮತ್ತು ಅವರ ಚೇಲಾಗಳು ಮಾಡಿದ ಹೇಯ ಕೃತ್ಯ. ಇದೀಗ ಎಲ್ಲಾ ನಿಯಮಾವಳಿಗಳನ್ನು ಗಾಳಿಗೆ ತೂರಿ ರಾತೋರಾತ್ರಿ ಮೂರ್ತಿಯನ್ನು ತೆರವುಗೊಳಿಸಲು ಪ್ರಯತ್ನ ನಡೆಸಿದ್ದು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಅಲ್ಲದೇ
ನಿರ್ಮಿತಿ ಕೇಂದ್ರ ಈ ಕಾಮಗಾರಿ ಮುಂದುವರಿಸಬಾರದು.ಕೃಷ್ಣ ನಾಯ್ಕ್ ಅವರಿಗೆ ಕಾಮಗಾರಿ ಟೆಂಡರ್ ನೀಡಬಾರದು. ಮೂರ್ತಿ ರಚನೆಯ ಅನುಭವ ಇದ್ದವರಿಗೆ ಗುತ್ತಿಗೆ ನೀಡಬೇಕೆಂದು ಒತ್ತಾಯಿಸಿದರು.
ಗೋಮಾಳ ಭೂಮಿಯಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣಕ್ಕೆ ಆಕ್ಷೇಪಣೆ ಇದ್ದರೂ, ನಿರ್ಮಿತಿ ಕೇಂದ್ರದ ಅಧ್ಯಕ್ಷರಾಗಿದ್ದು, ಅಂದಿನ ಜಿಲ್ಲಾಧಿಕಾರಿ ಯಾವ ಆಧಾರದಲ್ಲಿ ಯೋಜನೆಗೆ ಅನುಮತಿ ನೀಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಸಿಐಡಿ ತನಿಖೆಗೆ ಸರ್ಕಾರ ಆದೇಶ ನೀಡಲಾಗಿದೆ, ಈಗ ನಿಮ್ಮದೇ ಸರ್ಕಾರವಿದ್ದರೂ ಈವರೆಗೂ ತನಿಖೆ ಆರಂಭವಾಗಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಅತೀ ಶೀಘ್ರದಲ್ಲೇ ಈ ಕುರಿತು ತನಿಖೆ ಆರಂಭವಾಗುತ್ತದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸದಾಶಿವ ದೇವಾಡಿಗ, ಜಾರ್ಜ್ ಕ್ಯಾಸ್ಟಲಿನೋ ಮುಂತಾದವರು ಉಪಸ್ಥಿತರಿದ್ದರು