ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆಜಿ ಮಹಿಳಾ ಕುಸ್ತಿ ವಿಭಾಗದ ಫೈನಲ್ ನಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ್ದರ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು ಇದೀಗ ಅರ್ಜಿಯನ್ನು ವಜಾ ಮಾಡಿದೆ. ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆಜಿ ಮಹಿಳಾ ಕುಸ್ತಿ ವಿಭಾಗದ ಫೈನಲ್ ನಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ ಪ್ರಕರಣವನ್ನು ಆಲಿಸಿದ ಸಿಎಎಸ್ ತನ್ನ ನಿರ್ಧಾರವನ್ನು ಆಗಸ್ಟ್ 16ಕ್ಕೆ ಮುಂದೂಡಿತ್ತು. ಆದರೆ ಇಂದು ದಿಢೀರ್ ನಿರ್ಧಾರ ಪ್ರಕಟಿಸಿದ CAS ಅರ್ಜಿಯನ್ನು ವಜಾಗೊಳಿಸಿರುವುದಾಗಿ ಹೇಳಿದೆ
ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 7ನೇ ಪದಕ ಸಾಧನೆ ಮಾಡುವ ಭಾರತದ ಆಸೆ ಭಗ್ನಗೊಂಡಿದೆ. ಕೇವಲ 100 ಗ್ರಾಂ ಹೆಚ್ಚಿದ್ದ ಕಾರಣಕ್ಕಾಗಿ ತನ್ನನ್ನ 50 ಕೆಜಿ ಮಹಿಳಾ ಕುಸ್ತಿ ವಿಭಾಗದ ಫೈನಲ್‌ನಿಂದ ಅನರ್ಹ ಮಾಡಲಾಗಿತ್ತು. ಆದರೆ, ನಾನು ಜಂಟಿ ಬೆಳ್ಳಿ ಪದಕಕ್ಕೆ ಅರ್ಹನಾಗಿದ್ದೇನೆ ಎಂದು ಸ್ವಿಜರ್ಲೆಂಡ್‌ನಲ್ಲಿರುವ ಜಾಗತಿಕ ಕ್ರೀಡಾ ನ್ಯಾಯಮಂಡಳಿ ಎದುರು ಅರ್ಜಿ ಹಾಕಿದ್ದರು. ಆದರೆ, ಕ್ರೀಡಾ ನ್ಯಾಯಮಂಡಳಿ ತನ್ನ ಆಪರೇಟೀವ್ ತೀರ್ಪಿನಲ್ಲಿ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನಿರ್ಧಾರವನ್ನು ಎತ್ತಿಹಿಡಿಯಲು ನಿರ್ಧರಿಸಿದೆ.
ವಿನೇಶ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಾತ್ರವಲ್ಲ. ಈ ಹಿಂದೆಯೂ ಎರಡು ಬಾರಿ ಆಘಾತ ಎದುರಾಗಿತ್ತು. ವಿನೇಶ್ ಅವರು 2016ರ ರಿಯೋ ಗೇಮ್ಸ್‌ನಲ್ಲಿ ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿದ್ದರು. 2016ರ ರಿಯೊ ಒಲಿಂಪಿಕ್ಸ್‌ನ ಕ್ವಾರ್ಟರ್-ಫೈನಲ್‌ನಲ್ಲಿ ಮೊಣಕಾಲಿನ ಗಾಯದಿಂದಾಗಿ ಅವರ ಪದಕದ ನಿರೀಕ್ಷೆಯು ಭಗ್ನಗೊಂಡಿತು. ಇದರ ನಂತರ, ಅವರು 2020ರಲ್ಲಿ ಟೋಕಿಯೊ ಒಲಿಂಪಿಕ್ಸ್‌ನ ಕ್ವಾರ್ಟರ್-ಫೈನಲ್‌ನಲ್ಲಿ 53 ಕೆಜಿ ವಿಭಾಗದಲ್ಲಿ ಸೋತಿದ್ದರು. ಈಗ 2024ರಲ್ಲಿ ಅವರು ಅಧಿಕ ತೂಕದ ಕಾರಣದಿಂದ ಹೊರಗುಳಿದಿದ್ದರು.
`