ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಚಿನ್ನದ ಕನಸು ಸಾಕಾರಗೊಳಿಸಲು ಮುನ್ನುಗ್ಗುತ್ತಿದ್ದ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹ ಭಾರಿ ನಿರಾಸೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ 100 ಗ್ರಾಂ ತೂಕ ಹೆಚ್ಚಾದ ಕಾರಣ ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ನಿAದ ಅನರ್ಹಗೊಂಡಿದ್ದರು. ಭಾರತದ ಮನವಿ, ಪ್ರತಿಭಟನೆಗಳಿಂದ ಒಲಿಂಪಿಕ್ಸ್ ಸಮಿತಿ ನಿರ್ಧಾರ ಬದಲಾಗಲಿಲ್ಲ. ಇತ್ತ ಅನರ್ಹದ ಬೆನ್ನಲ್ಲೇ ವಿನೇಶ್ ಫೋಗಟ್ ವಿದಾಯ ಘೋಷಿಸಿದ್ದಾರೆ. ವಿದಾಯ ಘೋಷಿಸುತ್ತಿದ್ದಂತೆ ವಿನೇಶ್ ಫೋಗಟ್ ಭಾವುಕರಾಗಿದ್ದಾರೆ. ಇದೇ ವೇಳೆ ತಾಯಿ ಬಳಿ ಕ್ಷಮೆ ಕೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಭಾವುಕ ಸಂದೇಶ ಪ್ರಕಟಿಸಿರುವ ಅವರು, ಅಮ್ಮ, ನನ್ನ ವಿರುದ್ಧ ಕುಸ್ತಿ ಗೆದ್ದಿದೆ, ನಾನು ಸೋತೆ, ಕ್ಷಮಿಸಿ. ನಿನ್ನ ಕನಸು, ನನ್ನ ಧೈರ್ಯ ಎಲ್ಲ ಛಿದ್ರವಾಯಿತು. ನನ್ನ ಧೈರ್ಯ ಸಂಪೂರ್ಣ ಕುಗ್ಗಿದೆ, ಈಗ ಹೆಚ್ಚಿನ ಶಕ್ತಿ ಉಳಿದಿಲ್ಲ ಎಂದು ಬರೆದುಕೊಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ನ 50 ಕಿಲೋ ತೂಕದ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಫೈನಲ್‌ಗೂ ಮುನ್ನ ವಿನೇಶ್ ಅವರನ್ನು ಅನರ್ಹಗೊಳಿಸಲಾಗಿತ್ತು. ಬುಧವಾರ ಸಂಜೆ ನಡೆಯಲಿದ್ದ ಫೈನಲ್ ಪಂದ್ಯಕ್ಕೂ ಮುನ್ನ ಬೆಳಿಗ್ಗೆ 100 ಗ್ರಾಂ ಹೆಚ್ಚಿನ ತೂಕವನ್ನು ಹೊಂದಿರುವ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು ಅವರನ್ನು ಒಲಿಂಪಿಕ್ಸ್ನಿAದ ಅನರ್ಹಗೊಳಿಸಲಾಯಿತು.
ವಿನೇಶ್ ಫೋಗಟ್ ಈ ಬಾರಿ 50 ಕೆಜಿ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. 50 ಕೆಜಿಯ ಪ್ರಾಥಮಿಕ ಸುತ್ತಿನ ಪಂದ್ಯಗಳು ಆರಂಭಕ್ಕೂ ಮುನ್ನ ವಿನೇಶ್ ಫೋಗಟ್ 49.9 ಕೆಜಿ ತೂಕ ಹೊಂದಿದ್ದರು. ಆದರೆ ಫೈನಲ್ ಪಂದ್ಯಕ್ಕೂ ಮುನ್ನ ನಡೆಸಿದ ತೂಕ ಪರೀಕ್ಷೆಯಲ್ಲಿ ವಿನೇಶ್ ಫೋಗಟ್ 50.1 ಕೆಜಿ ತೂಕ ಹೊಂದಿದ್ದರು. 100 ಗ್ರಾಂ ತೂಕ ಹೆಚ್ಚಾದ ಕಾರಣ ವಿನೇಶ್ ಫೋಗಟ್ ಕುಸ್ತಿಯಿಂದ ಅನರ್ಹಗೊಂಡಿದ್ದಾರೆ.
ಆದರೆ ಫೈನಲ್ ಪಂದ್ಯದ ಹಿಂದಿನ ರಾತ್ರಿ ವಿನೇಶ್ ರಾತ್ರಿಯಿಡಿ ತೂಕ ಇಳಿಸಲು ಕಸರತ್ತು ನಡೆಸಿದ್ದಾರೆ. 2 ಕೆಜಿ ತೂಕ ಇಳಿಸಲು ಭಾರಿ ಕಸರತ್ತು ನಡೆಸಿದ್ದರು. ವಿನೇಶ್ ಫೋಗಟ್ 52 ಕೆಜಿಗೆ ತೂಕ ಹೆಚ್ಚಾಗಿತ್ತು. ಹೀಗಾಗಿ ಅಹಾರ, ನೀರು ಸೇವಿಸದೆ ದೇಹ ದಂಡಿಸಿದ್ದರು. ಬಿಸಿನೀರಿನಲ್ಲಿ ಕುಳಿತು ಇಡೀ ರಾತ್ರಿ ಕಳೆದಿದ್ದರು. ಈ ಕಸರತ್ತಿನ ಪರಿಣಾಮ 2 ಕೆಜಿ ತೂಕ ಇಳಿಕೆಯಾಗಿತ್ತು. ಆದರೆ 100 ಗ್ರಾಂ ತೂಕ ಹೆಚ್ಚಾಗಿದ್ದ ಕಾರಣ ಅನರ್ಹಗೊಂಡಿದ್ದಾರೆ.
`