ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದ ಬೆನ್ನಲ್ಲೇ ನಿಗಮ ಮಂಡಳಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಕೈ ಕಾರ್ಯಕರ್ತರ ಲಾಬಿ ನಡೆಯುತ್ತಲೇ ಇತ್ತು. ಇದೀಗ ರಾಜ್ಯ ಸರ್ಕಾರ ಮುಂದಿನ ಆಗಸ್ಟ್ ಮೊದಲ ವಾರದಲ್ಲಿ ನಿಗಮ ಮಂಡಳಿಗೆ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಿಸಲು ಚಿಂತನೆ ನಡೆಸಿದೆ.ಈಗಾಗಲೇ ಕೆಲವು ನಿಗಮ ಮಂಡಳಿಯ ಹುದ್ದೆಗಳಿಗೆ ಸಚಿವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದುಬಾಕಿ ಉಳಿದಿರುವ ನಿಗಮ-ಮಂಡಳಿ ಹುದ್ದೆಗಳಿಗೆ 70:30 ಸೂತ್ರದ ಅಡಿಯಲ್ಲಿ ಕಾರ್ಯಕರ್ತರಿಗೆ, ಶಾಸಕರಿಗೆ ನೀಡಲಿದೆ ಎಂದು ಹೇಳಲಾಗುತ್ತಿದೆ.
ಇತ್ತ ನಿಗಮ ಮಂಡಳಿಗಳಿಗೆ ನೇಮಕಾತಿ ನಡೆಯಲಿದೆ ಎನ್ನುವ ಮಾಹಿತಿ ಪಡೆದ ಪ್ರಭಾವಿ ಶಾಸಕರು, ಕಾರ್ಯಕರ್ತರು, ಈಗಾಗಲೇ ನಿಗಮ-ಮಂಡಳಿಯ ಹುದ್ದೆಗಳಿಗೆ ಬೆನ್ನುಬಿದ್ದಿದ್ದಾರೆ. ಈ ಬಾರಿ ನಿಗಮ-ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷರ ನೇಮಕಾತಿಯಲ್ಲಿ ಶಾಸಕರಿಗಿಂತ ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಆದ್ಯತೆ ನೀಡಲು ಕಾಂಗ್ರೆಸ್ ಚಿಂತನೆ ನಡೆಸಿರುವ ಹಿನ್ನಲೆಯಲ್ಲಿ ಕಾರ್ಯಕರ್ತರು ತಮ್ಮ ನಾಯಕರ ಮೂಲಕ ಸ್ಥಾನ ಗಿಟ್ಟಿಸಿಕೊಳ್ಳುವ ಯತ್ನದಲ್ಲಿದ್ದಾರೆ
70:30 ಅನುಪಾತದಂತೆ ಅಂದರೆ ಶೇ.70ರಷ್ಟು ಹುದ್ದೆಗಳನ್ನು ಕಾರ್ಯಕರ್ತರಿಗೆ ನೀಡಿ, ಶೇ.30ರಷ್ಟು ಹುದ್ದೆಗಳನ್ನು ಶಾಸಕರಿಗೆ ನೀಡಲು ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದ್ದು ರಾಜ್ಯ ಸರ್ಕಾರದ ವಿವಿಧ ಸಚಿವಾಲಯದಲ್ಲಿನ 80 ರಿಂದ 90 ನಿಗಮ-ಮಂಡಳಿಗೆ ಇದೇ ಸೂತ್ರದ ಅಡಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಿಸಲಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೇ 70:30 ಅನುಪಾತದ ಬದಲಿಗೆ ಈ ಬಾರಿ 50:50 ಸೂತ್ರವನ್ನು ಕೂಡ ಅಳವಡಿಕೆ ಮಾಡುವಂತೆ ನಾಯಕರ ಒತ್ತಡದ ಹಿನ್ನಲೆಯಲ್ಲಿ ಅನುಪಾತದಲ್ಲಿ ಶೇ 50:50 ರ ಹಂಚಿಕೆಯ ಸಾಧ್ಯತೆಯಿದೆ ಎನ್ನಲಾಗುತ್ತಿದೆ.ಈ ನಿಮಯದಂತೆ 2.5 ವರ್ಷ ಒಬ್ಬರಿಗೆ, ಮತ್ತೆ 2.5 ವರ್ಷ ಮತ್ತೊಬ್ಬರಿಗೆ ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆ ನೀಡುವ ಮೂಲಕ ಅಸಮಾಧಾನ ಶಮನ ಮಾಡುವ ತಂತ್ರಗಾರಿಕೆ ಇದೆ ಎನ್ನಲಾಗುತ್ತಿದೆ.
ನಿಗಮ ಮಂಡಳಿಗಳ ಸ್ಥಾನಗಳಿಗೆ ಈ ಹಿಂದಿನ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳು, ಸಚಿವ ಸ್ಥಾನ ವಂಚಿತ ಶಾಸಕರಿಗೆ ಪ್ರಥಮ ಆದ್ಯತೆ ನೀಡುವ ಸಾಧ್ಯತೆಯಿದ್ದು ಉಳಿದ ಸ್ಥಾನಗಳನ್ನು ಆದ್ಯತೆ ಪ್ರಕಾರ ಹಂಚಿಕೆ ಮಾಡಲಾಗುತ್ತದೆ ಎನ್ನಲಾಗಿದೆ.