ಉಡುಪಿ : ಸೇವಾ ನ್ಯೂನತೆ ಹಾಗೂ ವಿಳಂಬ ಧೋರಣೆ ಅನುಸರಿಸಿದ ವಿಮಾ ಕಂಪನಿಗೆ ಬಡ್ಡಿ ಸಹಿತ 10 ಲಕ್ಷ ರೂ. ಪಾವತಿಸುವಂತೆ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
ಕಳೆದ 2018 ರ ಡಿಸೆಂಬರ್ 24 ರಂದು ಹೆಬ್ರಿ ನಿವಾಸಿ ದಿವಂಗತ ಸಂತೋಷ್ ಶೆಟ್ಟಿ ಅವರು ಯೂನಿವರ್ಸಲ್ ಸೊಂಪೊ ಜನರಲ್ ಇನ್ಶೂರೆನ್ಸ್ ಕಂಪನಿಯಿAದ ವೈಯಕ್ತಿಕ ಅಪಘಾತ ವಿಮಾ ಪಾಲಿಸಿ ಮಾಡಿಸಿಕೊಂಡಿದ್ದರು. ಸಂತೋಷ್ ಅವರು 2019 ರ ನವೆಂಬರ್ 1 ರಂದು ನದಿಯಲ್ಲಿ ಸ್ನಾನ ಮಾಡುವ ವೇಳೆ ಮುಳುಗಿ ಸಾವನ್ನಪ್ಪಿದರು. ಅವರ ವಾರಸುದಾರರಾದ ಪುಷ್ಪಾ ಶೆಟ್ಟಿ ಮತ್ತು ದಿವ್ಯಾ ಶೆಟ್ಟಿ ಅವರು ವಿಮಾ ಕಂಪನಿಯನ್ನು ಸಂಪರ್ಕಿಸಿ ಸಂತೋಷ್ ಶೆಟ್ಟಿ ಅವರ ಸಾವಿನ ಬಗ್ಗೆ ವಿಮಾ ಕ್ಲೈಮ್ ಸಲ್ಲಿಸಿದ್ದರು. ಅರ್ಜಿದಾರರು ತಡವಾಗಿ ಸಲ್ಲಿಸಿದ್ದಾರೆ ಎಂಬ ಕಾರಣಕ್ಕಾಗಿ ಕಂಪನಿಯು ಕ್ಲೈಮ್ ಅನ್ನು ತಿರಸ್ಕರಿಸಿತ್ತು.
ಬಳಿಕ ಸಂತೋಷ್ ಶೆಟ್ಟಿ ಅವರ ವಾರಸುದಾರರು ವಕೀಲರ ಮೂಲಕ ಜಿಲ್ಲಾ ಗ್ರಾಹಕರ ವಿವಾದ ಇತ್ಯರ್ಥ ಪ್ರಾಧಿಕಾರದ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು.
ವಾದಗಳನ್ನು ಆಲಿಸಿದ ಮತ್ತು ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯವು, ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರದ ಸುತ್ತೋಲೆ ಮತ್ತು ಈ ವಿಷಯದ ಕುರಿತು ರಾಷ್ಟ್ರೀಯ ಪ್ರಾಧಿಕಾರದ ಹಿಂದಿನ ತೀರ್ಪಿನ ಆಧಾರದ ಮೇಲೆ ಅಪಘಾತ ವಿಮೆ ಕ್ಲೈಮ್‌ಗೆ 10 ಲಕ್ಷ ರೂ. ಗಳನ್ನು ಪಾವತಿಸಲು ವಿಮಾ ಕಂಪನಿಗೆ ಆದೇಶಿಸಿದೆ. ಅಲ್ಲದೆ ಕ್ಲೈಮ್ ನಿರಾಕರಣೆ ದಿನಾಂಕದ ನಂತರದಿAದ ತೀರ್ಪಿನ ದಿನಾಂಕದವರೆಗಿನ ಅವಧಿಗೆ ಬಡ್ಡಿಯಾಗಿ 25,000 ರೂಪಾಯಿಗಳನ್ನು ಅರ್ಜಿದಾರರಿಗೆ ಪಾವತಿಸಲು ಮತ್ತು 30 ದಿನಗಳಲ್ಲಿ ನ್ಯಾಯಾಲಯದ ವೆಚ್ಚವಾಗಿ 10,000 ರೂಪಾಯಿಗಳನ್ನು ಪಾವತಿಸಲು ನ್ಯಾಯಾಲಯವು ಕಂಪನಿಗೆ ಸೂಚಿಸಿದೆ.
ಜಿಲ್ಲಾ ಗ್ರಾಹಕರ ನ್ಯಾಯಾಲಯದ ಅಧ್ಯಕ್ಷ ಸುನೀಲ್ ಟಿ.ಎಂ.ರೆಡ್ಡಿ, ಸದಸ್ಯರಾದ ಸುಜಾತಾ ಬಿ ಕೊರಳ್ಳಿ ಮತ್ತು ಪ್ರೇಮಾ ತೀರ್ಪು ನೀಡಿದ್ದಾರೆ. ಅರ್ಜಿದಾರರ ಪರ ಕಾರ್ಕಳದ ವಿವೇಕಾನಂದ ಮಲ್ಯ ವಾದ ಮಂಡಿಸಿದ್ದರು