ಬಾಲಸೋರ್: ಒಡಿಶಾ ರೈಲು ದುರಂತ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಸಿಬಿಐ ಪೊಲೀಸರು ಇತ್ತೀಚೆಗೆ ಮೂವರು ರೈಲ್ವೇ ಅಧಿಕಾರಿಗಳನ್ನು ಬಂಧಿಸಿದ್ದರು. ಇದೀಗ ಈ ಅಧಿಕಾರಿಗಳು ಸೇರಿ ಒಟ್ಟು 7 ರೈಲ್ವೇ ಸಿಬ್ಬಂದಿಯನ್ನು ಇಲಾಖೆ ಅಮಾನತು ಮಾಡಿದೆ. ಸ್ಟೇಶನ್ ಮಾಸ್ಟರ್, ಟ್ರಾಫಿಕ್ ಇನ್ಸ್ಪೆಕ್ಟರ್, ನಿರ್ವಹಣಾಗಾರ ಸೇರಿದೆಂತೆ 7 ಮಂದಿ ಅಮಾನತುಗೊಂಡಿದ್ದಾರೆ.
ಸ್ಟೇಶನ್ ಮಾಸ್ಟರ್, ಟ್ರಾಫಿಕ್ ಇನ್ಸ್ಪೆಕ್ಟರ್, ನಿರ್ವಹಣಗಾರ ಗೂಡ್ಸ್ ರೈಲು ನಿಂತಿರುವ ಸೂಚನೆಯನ್ನು ನೀಡಿದ್ದರೆ, ಮಹಾ ದುರಂತ ತಪ್ಪಿಸಲು ಸಾಧ್ಯವಾಗುತ್ತಿತ್ತು. ಕನಿಷ್ಠ ಪಕ್ಷ ಸಾವಿನ ಪ್ರಮಾಣ ತಗ್ಗಿಸಲು ಸಾಧ್ಯವಾಗುತ್ತಿತ್ತು. ಆದರೆ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿಲ್ಲ ಎಂದು ರೈಲ್ವೇ ಇಲಾಖೆ ಸಿಬ್ಬಂದಿಗಳನ್ನು ಅಮಾನತು ಮಾಡಿದೆ.
ಸೌತ್ ಈಸ್ಟರ್ನ್ ರೈಲ್ವೇ ಜನರಲ್ ಮ್ಯಾನೇಜರ್ ಇಂದು ಬಾಲಾಸೋರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಅಪಘಾತವನ್ನು ತಪ್ಪಿಸಲು ಅವಕಾಶಗಳಿತ್ತು. ಆದರೆ ಸಿಬ್ಬಂದಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಜನರಲ್ ಮ್ಯಾನೇಜರ್ ರೈಲ್ವೇ ಸಿಬ್ಬಂದಿಗಳನ್ನು ಅಮಾನತು ಮಾಡಿದ್ದಾರೆ. ಇದಕ್ಕೂ ಮೊದಲು ಸಿಬಿಐ ಹಿರಿಯ ರೈಲ್ವೇ ಅಧಿಕಾರಿಗಳಾದ ಸೆಕ್ಷನ್ ಎಂಜಿನೀಯರ್ ಮೊಹಮ್ಮದ್ ಅಮಿರ್ ಖಾನ್, ಸೆಕ್ಷನ್ ಸಿಗ್ನಲ್ ಎಂಜಿನಿಯರ್ ಅರುಣ್ ಕುಮಾರ್ ಮಹಾಂತ ಹಾಗೂ ತಾಂತ್ರಿಕ ಸಿಬ್ಬಂದಿ ಪಪ್ಪು ಕುಮಾರ್‌ನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.
ಸಿಬಿಐ ತನಿಖೆ ಕೈಗೆತ್ತಿಕೊಂಡ ಬಳಿಕ ಬಾಹಾನಗಾದ ಎಲ್ಲ ರೈಲ್ವೆ ಸಿಬ್ಬಂದಿಗಳನ್ನು ವಿಚಾರಣೆಗೆ ಒಳಪಡಿಸಿತ್ತು ಹಾಗೂ ಕೆಲವರ ಮನೆಗಳ ಮೇಲೆ ದಾಳಿಯನ್ನೂ ಮಾಡಿತ್ತು. ಈ ವೇಳೆ ಅಪಘಾತದಲ್ಲಿ ಈ ಮೂವರ ಪಾತ್ರವಿದೆ ಎಂದು ಗೊತ್ತಾಗಿದೆ. ಅವರಿಗೆ ತಾವು ಹಳಿಗಳ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಮಾಡಿದ ಬದಲಾವಣೆಗಳಿಂದ ಅಪಘಾತ ಆಗಬಹುದು ಎಂದು ಗೊತ್ತಿದ್ದೂ ಅವರು ನಿರ್ಲಕ್ಷ್ಯ ತಾಳಿ ಸುಮ್ಮನಿದ್ದರು. ಅಲ್ಲದೆ ಅಪವಾದ ತಮ್ಮ ಮೇಲೆ ಬರಬಾರದು ಎಂದು ಅವರು ಸಾಕ್ಷ್ಯನಾಶಕ್ಕೂ ಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಜೂ.2ರಂದು ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಬಾಹಾನಗಾಕ್ಕೆ ಬಂದಾಗ ಮೇನ್ ಲೈನ್‌ಗೆ ಸಿಗ್ನಲ್ ಇದ್ದರೂ, ಗೂಡ್ಸ್ ರೈಲು ನಿಂತಿದ್ದ ಲೂಪ್ ಲೈನ್‌ಗೆ ಹಳಿ ಬದಲಿಸಿ ತಿರುಗಿತ್ತು. ಆಗ ಗೂಡ್ಸ್ ರೈಲಿಗೆ ಕೋರಮಂಡಲ್ ಡಿಕ್ಕಿ ಹೊಡೆದು ಮತ್ತೊಂದು ಮಾರ್ಗದ ಮೇಲೆ ಹೋಗಿ ಬಿದ್ದಿತ್ತು. ಅದೇ ಕ್ಷಣಕ್ಕೆ ಅಲ್ಲಿಗೆ ಬಂದಿದ್ದ ಬೆಂಗಳೂರು-ಹೌರಾ ರೈಲು ಕೋರಮಂಡಲ್ ಬೋಗಿಗಳಿಗೆ ಡಿಕ್ಕಿ ಹೊಡೆದು ಭೀಕರ ತ್ರಿವಳಿ ಅಪಘಾತ ಸಂಭವಿಸಿ 294 ಮಂದಿ ಮೃತಪಟ್ಟಿದ್ದರು.