ಮಂಗಳೂರು: ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಸಿಎಂ ಸಿದ್ದರಾಮಯ್ಯ ಕರಾವಳಿ ಜಿಲ್ಲೆಗಳಿಗೆ ತಮ್ಮ ಮೊದಲ ಭೇಟಿ ನೀಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕರಾವಳಿ ಜಿಲ್ಲೆಗಳಲ್ಲಿ ನೈತಿಕ ಪೊಲೀಸಿಂಗ್ ನಡೆಯುತ್ತಿದೆ,ಇದರಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದ್ದು ಯಾವುದೇ ಕಾರಣಕ್ಕೂ ನೈತಿಕ ಪೊಲೀಸ್ ಗಿರಿಗೆ ಅವಕಾಶ ನೀಡುವುದಿಲ್ಲ ,ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಿದ್ದರಾಮಯ್ಯ ಎಚ್ಚರಿಸಿದರು.
ಇದೇ ವೇಳೆ ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿರುವ ಉಡುಪಿ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈ ಪ್ರಕರಣದ ಕುರಿತು ಪೊಲೀಸರು ಈಗಾಗಲೇ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಡಿವೈಎಸ್ಪಿ ನೇತ್ವದಲ್ಲಿ ತನಿಖೆ ನಡೆಯುತ್ತಿದ್ದು, ತನಿಖೆ ಮುಗಿಯಲಿ, ರಾಷ್ಟ್ರೀಯ ಮಹಿಳಾ ಆಯೋಗವೇ ಅಲ್ಲಿ ಕ್ಯಾಮರಾ ಇಟ್ಟಿರಲಿಲ್ಲ ಎಂದಿದ್ದಾರೆ. ತನಿಖಾ ವರದಿ ಬರಲಿ. ಆಮೇಲೆ ಈ ಬಗ್ಗೆ ಮಾತನಾಡುತ್ತೇನೆ ಎಂದ ಸಿಎಂ, ಕಾಲೇಜಿನಲ್ಲಿ ವಿದ್ಯಾರ್ಥಿಗಳು ತಮಾಷೆ ಮಾಡಿರಬಹುದು ಎಂದು ಹೋಂ ಮಿನಿಸ್ಟರ್ ಹೇಳಿರಬಹುದು. ಎಫ್ಐಆರ್ ಆಗಿ ತನಿಖೆ ನಡೆಯುತ್ತಿದೆ. ಡಿವೈಎಸ್ಪಿ ಮಟ್ಟದ ತನಿಖೆಯ ನಡುವೆ ಎಸ್ ಐಟಿ ತನಿಖೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಸೌಜನ್ಯ ಕೇಸ್ ಸಿಬಿಐಗೆ ಕೊಟ್ಟಿತ್ತು ಈ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿತ್ತು.. ಈಗ ಅವರ ಪೋಷಕರು ಮರು ತನಿಖೆಗೆ ಮನವಿ ಮಾಡಿದ್ದಾರೆ. ಕಾನೂನು ಪ್ರಕಾರ ಏನಾಗಬೇಕು ಅಂತ ನೋಡಿ ಮುಂದಿನ ನಿರ್ಧಾರ ಮಾಡುತ್ತೇವೆ. ನಾನು ವಕೀಲನಾಗಿ ಹೇಳುವುದಾದರೆ ಇದರ ಬಗ್ಗೆ ಹೈಕೋರ್ಟ್ ಗೆ ಅಪೀಲ್ ಹೋಗಬೇಕು. ನಾನು ಸಿಬಿಐ ಕೋರ್ಟ್ ಜಡ್ಜ್ ಮೆಂಟ್ ನೋಡಿಲ್ಲ.ಅವರ ಪೋಷಕರು ಜಡ್ಜ್ ಮೆಂಟ್ ಕಾಪಿ ತಂದು ಕೊಟ್ಟಿದ್ದಾರೆ. ಅದರ ಜಡ್ಜ್ ಮೆಂಟ್ ಓದಿ ಅಪೀಲ್ಗೆ ಅವಕಾಶ ಇದ್ಯಾ ಅಂತ ನೋಡುತ್ತೇನೆ ಎಂದು ತಿಳಿಸಿದರು.
ಸಾಮಾಜಿಕ ತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಟೀಕೆ ಮಾಡಿದರೆ ಕ್ರಮ ತೆಗೆದುಕೊಳ್ಳುವುದಿಲ್ಲ. ಸುಳ್ಳು ಸುದ್ದಿಗೆ ಕ್ರಮ. ಫ್ಯಾಮಿಲಿ ಬಗ್ಗೆ ಹೇಳುವುದು ಟೀಕೆನಾ? ಏನು ಬೇಕಾದರೂ ಹೇಳಬಹುದಾ? ನಿಮ್ಮ ಫ್ಯಾಮಿಲಿ ಬಗ್ಗೆ ಯಾರಾದ್ರೂ ಏನು ಬೇಕಾದರೂ ಹೇಳಬಹುದಾ ಎಂದು ಪ್ರಶ್ನಿಸಿದ ಸಿಎಂ, ಟೀಕೆ ಬೇರೆ, ಸುಳ್ಳು ಸುದ್ದಿ ಹಬ್ಬಿಸುವುದ ಬೇರೆ. ವೈಯಕ್ತಿಕವಾಗಿ ತೇಜೋವಧೆ ಮಾಡುವುದು ಕೂಡ ಬೇರೆ ಎಂದು ಹೇಳುವ ಮೂಲಕ ಬಿಜೆಪಿ ಕಾರ್ಯಕರ್ತೆಯ ಬಂಧನ ಪ್ರಕರಣವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.
ಇದೇ ವೇಳೆ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿದ ಸಿಎಂ ಪರಿಶೀಲನೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.