Share this news

ಕಾರ್ಕಳ: ಎರ್ಲಪಾಡಿ ಗ್ರಾಮದ ಬೈಲೂರಿನ ಉಮ್ಮಿಕಲ್ ಬೆಟ್ಟದ ಮೇಲೆ ಸ್ಥಾಪಿಸಿರುವ ತುಳುನಾಡಿನ ಪ್ರತೀಕವಾಗಿರುವ ಪರಶುರಾಮ ಥೀಂ ಪಾರ್ಕ್ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.ಕಾರ್ಕಳದ ಅಭಿವೃದ್ಧಿಯನ್ನು ಸಹಿಸದ ಕಾಂಗ್ರೆಸಿಗರು ಪರಶುರಾಮ ಥೀಮ್ ಪಾರ್ಕ್ ಕುರಿತು ಅಪಪ್ರಚಾರ ಮಾಡುತ್ತಿದ್ದು ಇದು ಅವರ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುಮಿತ್ ಶೆಟ್ಟಿ ಕೌಡೂರು ಹೇಳಿದ್ದಾರೆ.


ಪೃಕೃತಿ ಸೌಂದರ್ಯ ಹಾಗೂ ದೈವಿಕತೆಯಿಂದ ರಾಜ್ಯಾದ್ಯಂತ ಪ್ರಸಿದ್ಧವಾಗಿರುವ ಪರಶುರಾಮನ ವಿಗ್ರಹ ಹಾಗೂ ಥೀಂ ಪಾರ್ಕ್ ನ ಯಶಸ್ಸು ಈಗ ನಗರ ನಕ್ಸಲ್ ಮನಸ್ಥಿತಿಯ ಜನರಿಗೆ ಅರಗಿಸಿಕೊಳ್ಳದ ಸಂಗತಿಯಾಗಿದೆ. ಹೀಗಾಗಿ ಗೋಮಾಳದ ಜಾಗದಲ್ಲಿ ವಿಗ್ರಹ ಸ್ಥಾಪನೆ ಮಾಡಲಾಗಿದೆ ಎಂದು ಖ್ಯಾತೆ ತೆಗೆಯಲಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲೇ ಕಂದಾಯ ಇಲಾಖೆ ಗೋಮಾಳದ ಜಾಗದಲ್ಲಿ ಥೀಂ ಪಾರ್ಕ್ ನಿರ್ಮಾಣಕ್ಕೆ ಅವಕಾಶ ನಿರಾಕರಿಸಿದ್ದರೂ,ಹಣ ಮಂಜೂರು ಮಾಡಲಾಗಿದೆ ಎಂಬಿತ್ಯಾದಿ ಆರೋಪಗಳನ್ನು ಮಾಡಲಾಗುತ್ತಿದೆ.

ಕಾರ್ಕಳದ ಯಾವುದೇ ರೀತಿಯ ಬೆಳವಣಿಗೆ ಸಹಿಸದ ಕಾಂಗ್ರೆಸಿಗರು ಅಭಿವೃದ್ಧಿಯ ಬಗ್ಗೆ ಒಂದಿಲ್ಲೊಂದು ಕುಂಟು ನೆಪ ಹಾಗೂ ಅಪಪ್ರಚಾರವನ್ನು ಮಾಡುತ್ತಲೇ ಬಂದಿದೆ. ಆದರೆ ವಾಸ್ತವಾವಾಗಿ ಕಾರ್ಕಳವೂ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಗೋಮಾಳವನ್ನು ಬಳಸಿಕೊಂಡ ಉದಾಹರಣೆಗಳಿವೆ. ಅದಕ್ಕೂ ಮಿಗಿಲಾಗಿ ಕಾರ್ಕಳದ ತಾಲೂಕು ಕಚೇರಿಯೇ ಡೀಮ್ಡ್ ಅರಣ್ಯದ ವ್ಯಾಪ್ತಿಯಲ್ಲಿದೆ ಈ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಸುಮಿತ್ ಶೆಟ್ಟಿ ಪ್ರಶ್ನಿಸಿದ್ದಾರೆ.

ನಿಟ್ಟೆ ಪಂಚಾಯಿತಿ MRF ಘಟಕ ಸೇರಿದಂತೆ ಇನ್ನೂ ಕೆಲವು ಸಾರ್ವಜನಿಕ ಕಟ್ಟಡಗಳು ಗೋಮಾಳದ ಜಾಗದಲ್ಲೇ ಇದೆ. ಸಾರ್ವಜನಿಕ ಬಳಕೆಗೆ ಸರ್ಕಾರಿ ಜಾಗಗಳನ್ನು ಬಳಸಿಕೊಂಡ ಅನೇಕ ಉದಾಹರಣೆಗಳಿದ್ದರೂ ವೈಯಕ್ತಿಕ ದ್ವೇಷ ಹಾಗೂ ಅಸೂಯೆಯನ್ನು ಮನಸಿನಲ್ಲಿಟ್ಟುಕೊಂಡು ಪರಶುರಾಮ ಥೀಂ ಪಾರ್ಕ್ ಬಗ್ಗೆ ಅನಗತ್ಯ ಅಪಸ್ವರ ತೆಗೆಯಲಾಗುತ್ತಿದೆ. ಇದೊಂದು‌ ಹತಾಶ ಪ್ರಯತ್ನವಾಗಿದ್ದು, ಕಾರ್ಕಳದ ಪ್ರಜ್ಞಾವಂತ ಮತದಾರರು ಕ್ಷಮಿಸುವುದಿಲ್ಲ. ರಾಜ್ಯ ಹೊರರಾಜ್ಯಗಳಿಂದ ಪ್ರವಾಸಿಗರು ಆಗಮಿಸಿ ಸ್ಥಳೀಯರಲ್ಲಿ ಹಾಗೂ ನಮ್ಮಲ್ಲಿ ಈ ದೂರದೃಷ್ಟಿತ್ವದ ಯೋಜನೆಯ ಕುರಿತು ಮೆಚ್ಚುಗೆಯ ಮಾತುಗಳನ್ನೂ ಸದಾ ಹೇಳುತ್ತಿರುತ್ತಾರೆ. ಇದರ ಜತೆಗೆ ಪರಶುರಾಮ ಥೀಂ ಪಾರ್ಕ್ ನ ನಿರ್ವಹಣೆಯನ್ನು ಯಾರು ಮಾಡಬೇಕೆಂಬ ಪ್ರಶ್ನೆಯನ್ನು ಕಾಂಗ್ರೆಸ್ ಎತ್ತಿದೆ. ಕಾಂಗ್ರೆಸ್ ಮುಖಂಡರು ಸುಮ್ಮನಿದ್ದರೆ ಥೀಂ‌ಪಾರ್ಕ್ ನ ನಿರ್ವಹಣೆ ಯಾವುದೇ ಅಡ್ಡಿ ಇಲ್ಲದೇ ಸಾಗುತ್ತದೆ ಎಂದು ಸುಮಿತ್ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ಕುಟುಕಿದ್ದಾರೆ

Leave a Reply

Your email address will not be published. Required fields are marked *