ಕಾರ್ಕಳ:ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಗುಂಡ್ಯಡ್ಕ ಎಂಬಲ್ಲಿ ಕಲ್ಲಿನ ಕೋರೆಯಲ್ಲಿ ಕಾರ್ಮಿಕನೋರ್ವ ತಲೆಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಬಾಗಲಕೋಟೆ ಮೂಲದ ಕಾರ್ಮಿಕ ವೆಂಕಟೇಶ್(32) ಎಂಬವರು ಮೃತಪಟ್ಟಿದ್ದು, ಕಲ್ಲುಗಣಿಗಾರಿಕೆ ಸಂದರ್ಭದಲ್ಲಿ ನಡೆಸಿದ ಸ್ಪೋಟದಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ದಿನೇಶ್ ಶೆಟ್ಟಿ ಎಂಬವರ ಮಾಲಕತ್ವದ ನಿಟ್ಟೆ ಗುಂಡ್ಯಡ್ಕದ ಮಹಾಗಣಪತಿ ಸ್ಟೋನ್ ಕ್ರಶರ್ ಘಟಕದಲ್ಲಿ ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು ವೆಂಕಟೇಶ್ ಕಲ್ಲುಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಬ್ಲಾಸ್ಟಿಂಗ್ ನಿಂದ ಸಿಡಿದ ಕಲ್ಲು ಬಡಿದು ಗಂಭೀರವಾಗಿ ಗಾಯಗೊಂಡಿದ್ದರು ಎನ್ನಲಾಗಿದೆ. ವೆಂಕಟೇಶ್ ಸಾವಿನ ನಿಖರ ಕಾರಣದ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಪೊಲೀಸ್ ಮೂಲಗಳ ಪ್ರಕಾರ ಮೇಲ್ನೋಟಕ್ಕೆ ಸ್ಪೋಟದಿಂದ ಆತ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ವೆಂಕಟೇಶ್ ಸಾವಿಗೆ ಸ್ಪೋಟವೇ ಕಾರಣವಾಗಿದ್ದರೆ ಆ ಕೋರೆಗೆ ಗಣಿಗಾರಿಕೆ ಹಾಗೂ ಬ್ಲಾಸ್ಟಿಂಗ್ ಲೈಸನ್ಸ್ ಇದೆಯೇ ಎನ್ನುವುದನ್ನು ಪರಿಶೀಲನೆ ನಡೆಸಲಾಗುತ್ತದೆ, ಅಲ್ಲದೇ ಸ್ಪೋಟದಿಂದ ಮೃತಪಟ್ಟಿದ್ದಾನೆಯೇ ಅಥವಾ ಇತರೇ ಕಾರಣದಿಂದ ಸಾವನ್ನಪ್ಪಿದ್ದಾನೆಯೇ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಹಿರಂಗವಾಗಲಿದೆ, ಆತನ ಗಣಿಗಾರಿಕೆ ನಡೆಸುವ ವೇಳೆ ಮೃತಪಟ್ಟಿದ್ದರೆ ಕಾರ್ಮಿಕರ ಸುರಕ್ಷತೆ ವಹಿಸದೇ ನಿರ್ಲಕ್ಷö್ಯತನ ತೋರಿದ್ದರೆ ಗಣಿ ಮಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಕಾರ್ಕಳ ವೃತ್ತ ನಿರೀಕ್ಷಕ ನಾಗರಾಜ್.ಟಿ.ಡಿ ಸ್ಪಷ್ಟಪಡಿಸಿದ್ದಾರೆ.
ಕೆಲವು ಬಲ್ಲಮೂಲಗಳ ವರದಿಯ ಪ್ರಕಾರ ವೆಂಕಟೇಶ್ ಸ್ಟೋಟದ ಸಂದರ್ಭದಲ್ಲಿ ಕಲ್ಲುಸಿಡಿದು ಮೃತಪಟ್ಟಿದ್ದಾನೆ ಎನ್ನುವ ಖಚಿತ ಮಾಹಿತಿಯಿದ್ದು, ಈ ಘಟನೆಯಲ್ಲಿ ಕಲ್ಲುಗಣಿಗಾರಿಕೆ ಮಾಲಕನ ಪರವಾನಿಗೆ ಹಾಗೂ ಕಾರ್ಮಿಕರ ಸುರಕ್ಷತೆ ವಿಚಾರದಲ್ಲಿ ಕೈಗೊಂಡ ಕ್ರಮಗಳ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಕಾರ್ಕಳದಲ್ಲಿ ಇತ್ತೀಚಿನ ದಿನಗಳಲ್ಲಿ ಅಕ್ರಮ ಗಣಿಗಾರಿಕೆ ವಿಚಾರ ಭಾರೀ ಸದ್ದು ಮಾಡುತ್ತಿದ್ದು, ಬಹುತೇಕ ಕೆಲವೆಡೆ ಪರವಾನಿಗೆ ಇಲ್ಲದೇ ಡೀಮ್ಡ್ ಅರಣ್ಯದಲ್ಲಿ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಕಾರ್ಕಳದ ಬೆರಳೆಣಿಕೆಯ ಕಲ್ಲುಕೋರೆಗಳಿಗೆ ಮಾತ್ರ ಡಿಟೋನೇಟರ್ ಬಳಸಿ ಸ್ಪೋಟ ನಡೆಸುವ ಪರವಾನಿಗೆ ನೀಡಲಾಗಿದ್ದು ಹೆಚ್ಚಿನ ಕೋರೆಗಳಲ್ಲಿ ಬೆಂಕಿಹಾಕಿ ಸಾಂಪ್ರದಾಯಿಕ ಗಣಿಗಾರಿಕೆಗೆ ಮಾತ್ರ ಅವಕಾಶವಿದೆ,ಆದರೆ ಹೆಚ್ಚಿನ ಕಲ್ಲುಕೋರೆ ಮಾಲಕರು ಅಕ್ರಮವಾಗಿ ಸ್ಪೋಟ ನಡೆಸಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎನ್ನುವ ಆರೋಪವಿದೆ. ಗಣಿ ಇಲಾಖೆ ಅಧಿಕಾರಿಗಳು ಅಕ್ರಮ ಕಲ್ಲುಗಣಿಗಾರಿಕೆ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ