ಬೆಂಗಳೂರು: ಸ್ಪೋಟಕ್ಕೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದ ಐವರು ಶಂಕಿತ ಉಗ್ರರನ್ನು ಶೀಘ್ರದಲ್ಲೇ ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ಸಿಸಿಬಿ ವಿಚಾರಣೆ ಮುಗಿದ ನಂತರ ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.
ರಾಷ್ಟ್ರೀಯ ತನಿಖಾ ದಳ ಈಗಾಗಲೇ ಪ್ರಕರಣದ ಬಗ್ಗೆ ಸಿಸಿಬಿಯಿಂದ ಪ್ರಾಥಮಿಕ ಮಾಹಿತಿ ಪಡೆದಿದೆ. ಶಂಕಿತರ ಬಳಿ ಪತ್ತೆಯಾದ ಗ್ರೆನೇಡ್, ನಾಡ ಪಿಸ್ತೂಲ್‌ಗಳ ಬಗ್ಗೆ ಎನ್‌ಐಎ ನಿಗಾ ಇಟ್ಟಿದೆ. ಈ ಹಿನ್ನೆಲೆಯಲ್ಲಿ ಶಂಕಿತ ಉಗ್ರರ ಒಳಸಂಚು ಮತ್ತು ಷಡ್ಯಂತ್ರ ಬಗ್ಗೆ ವಿಚಾರಣೆ ನಡೆಸಲಿದೆ.
ವಿದೇಶದಿಂದ ಭಾರತಕ್ಕೆ ಫಂಡಿAಗ್ ಮತ್ತು ಗ್ರೆನೇಡ್ ಸರಬರಾಜನ್ನು ಗಂಭೀರವಾಗಿ ಪರಿಗಣಸಿದ ಎನ್‌ಐಎ ಅಧಿಕಾರಿಗಳು ಐವರನ್ನು ವಶಕ್ಕೆ ಪಡೆಯಲಿದ್ದಾರೆ. ಅಲ್ಲದೇ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೇದ್ ಕರೆ ತರುವ ಬಗ್ಗೆ ಕಾನೂನು ಪ್ರಕ್ರಿಯೆ ಕೈಗೊಳ್ಳಲಿದೆ. ಜುನೈದ್ ಪತ್ತೆಗೆ ಸಿಸಿಬಿ ಈಗಾಗಲೇ ಲುಕ್ ಔಟ್ ನೋಟಿಸ್ ಹೊರಡಿಸಿದೆ.
ಜುನೇದ್‌ನನ್ನು ಎನ್‌ಐಎ ಮತ್ತು ಸಿಬಿಐ ಇಂಟರ್ ಪೋಲ್ ಮೂಲಕ ವಶಕ್ಕೆ ಪಡೆಯಲು ತಯಾರಿ ನಡೆಸಿದೆ. ಎನ್‌ಐಎ ಇನ್ನು ಕೆಲವೇ ದಿನಗಳಲ್ಲಿ ಐವರು ಶಂಕಿತರನ್ನ ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕಲಿದೆ. ಎನ್‌ಐಎ ಅಧಿಕಾರಿಗಳು ನ್ಯಾಯಾಲಯದ ಅನುಮತಿ ಪಡೆದು ಜೈಲಿನಲ್ಲಿ ಅಥವಾ ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆಯಲಿದ್ದಾರೆ.
ಸುಲ್ತಾನ್‌ಪಾಳ್ಯದ ಮನೆಯೊಂದರ ಮೇಲೆ ಜುಲೈ 1ರಂದು ದಾಳಿ ಮಾಡಿದ್ದ ಸಿಸಿಬಿ ಪೊಲೀಸರು, ಶಂಕಿತರಾದ ಸೈಯದ್ ಸುಹೇಲ್ ಖಾನ್, ಜಾಹೀದ್ ತಬ್ರೇಜ್, ಸೈಯದ್ ಮುದಾಸೀರ್ ಪಾಷಾ, ಮಹಮ್ಮದ್ ಫೈಜಲ್ ರಬ್ಬಾನಿ, ಹಾಗೂ ಮೊಹಮ್ಮದ್ ಉಮರ್‌ನನ್ನು ಬಂಧಿಸಿದ್ದರು.