ಬೆಂಗಳೂರು: ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಮಂಗಳವಾರ ರಾತ್ರಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕರ್ನಾಟಕದಲ್ಲಿ ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಐವರು ಶಂಕಿತರ ಉಗ್ರರನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಕನಕನಗರದ ಸುಲ್ತಾನ್ ಪಾಳ್ಯ ಮಸಿದಿಯ ಬಳಿ ಸಭೆ ನಡೆಸುತ್ತಿರುವ ಮಾಹಿತಿ ಪಡೆದ ಸಿಸಿಬಿ ಪೊಲೀಸರ ತಂಡ ಶಂಕಿತ ಉಗ್ರರಾದ ಸೈಯ್ಯದ್ ಸುಹೈಲ್,ಉಮರ್,ಜುನೇದ್ ಮುದಾಸಿರ್,ಜಾಹೀದ್, ಫೈಜಲ್ ರಬ್ಬಾನಿ ಎಂಬುವರನ್ನು ಬಂಧಿಸಿದೆ.
ಬಂಧಿತ ಆರೋಪಿಗಳು 2007 ರ ಅಕ್ಟೋಬರ್ ನಲ್ಲಿ ಮೂವರ ಕಿಡ್ನಾಪ್ ಹಾಗೂ ಓರ್ವನ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದರು. ಜೈಲಿನಲ್ಲಿರುವಾಗಲೇ ಆರೋಪಿಗಳು ಉಗ್ರರ ಜೊತೆಗೆ ಸಂಪರ್ಕ ಹೊಂದಿದ್ದರು ಎನ್ನುವ ಮಾಹಿತಿ ಪೊಲೀಸರ ತನಿಖೆಯಿಂದ ಹೊರಬಂದಿದ್ದು, ಬಂಧಿತ ಶಂಕಿತ ಉಗ್ರರು ಕರ್ನಾಟಕದಲ್ಲಿ ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದರು ಎನ್ನಲಾಗಿದ್ದು ಪೊಲೀಸರು ಈ ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.