Share this news

ಕಾರ್ಕಳ:ಜನಪ್ರತಿನಿಧಿಯಾದವನು ಜನಸಾಮಾನ್ಯರ ಜತೆಗಿರಬೇಕು.ತನ್ನ ಕ್ಷೇತ್ರದ ಅಭಿವೃದ್ಧಿ ಜನರ ನೋವು ನಲಿವುಗಳಿಗೆ ಸ್ಪಂದಿಸುವುದೇ ನಿಜವಾದ ಬದ್ದತೆ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ ಹೇಳಿದರು.

ಅವರು ಸೋಮವಾರ ಕಾರ್ಕಳದ ಬಂಡೀಮಠದಲ್ಲಿ ನಡೆದ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದರು. ಉದ್ಯಮದ ಜತೆಗೆ ಸಮಾಜದ ಬಡವರ ನೋವಿಗೆ ದ್ವನಿಯಾಗಬೇಕೆನ್ನುವ ನಿಟ್ಟಿನಲ್ಲಿ ಕಟ್ಟಕಡೆಯ ವ್ಯಕ್ತಿಯೊಂದಿಗೆ ಇರಬೇಕೆನ್ನುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ.ಹೆಸರು ಹಾಗೂ ಹಣಗಳಿಕೆಗೆ ರಾಜಕೀಯ ಬಂದು ಕೋಟಿಗಟ್ಟಲೆ ಲೂಟಿ ಹೊಡೆದವರನ್ನು ದೂರವಿಡವೇಕು. ವೀರಪ್ಪ ಮೊಯ್ಲಿ ಹಾಗೂ ಗೋಪಾಲ ಭಂಡಾರಿ ಇಬ್ಬರೇ ನನ್ನ ಜೀವನದ ರೋಲ್ ಮಾಡೆಲ್ ಗಳು, ಅವರ ಮಾರ್ಗದರ್ಶನದಲ್ಲಿ ಕಾರ್ಕಳವನ್ನು ಮಾದರಿಯನ್ನಾಗಿಸುತ್ತೇನೆ ಎಂದರು.

ಯಾವ ಜನಪ್ರತಿನಿಧಿಯಾದರೂ ಆತ ತಾನು ಆರಿಸಿ ಬಂದ ಕ್ಷೇತ್ರದ ಅಭಿವೃದ್ಧಿ ಸಾಧಿಸುವುದು ಅವನ ಹೆಚ್ಚುಗಾರಿಕೆಯಲ್ಲ,ಅದು ಅವನ ಕರ್ತವ್ಯ ಎಂದರು.ಕ್ಷೇತ್ರದ ಬಡವರ ಬದುಕು ಕಟ್ಟುವ ಕೆಲಸವಾಗಬೇಕಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಧರ್ಮ ಹಾಗೂ ಅಧರ್ಮಗಳ ನಡುವಿನ ಹೋರಾಟದಲ್ಲಿ ಸತ್ಯ,ಧರ್ಮ ಗೆಲ್ಲಬೇಕಿದೆ. ಈಗಾಗಲೇ ಧರ್ಮದ ಹೆಸರಿನಲ್ಲಿ ಬಿಜೆಪಿ ಮತಗಳಿಸಲು ಪ್ರಯತ್ನಿಸುತ್ತಿದೆ.ಹಿಂದೂ ಧರ್ಮದ ಬಗ್ಗೆ ನನಗೆ ಯಾರೂ ಪಾಠ ಹೇಳಿಕೊಡುವ ಅಗತ್ಯವಿಲ್ಲ,ಹಿಂದೂ ಧರ್ಮ ಕೇವಲ ಬೂಟಾಟಿಕೆಯ ಧರ್ಮವಾಗದೇ ಅದು ಹೃದಯದಲ್ಲಿ ಇರಬೇಕು ಎಂದರು.

ಕನ್ನಡ ಸಂಸ್ಕೃತಿ ಸಚಿವರಿಗೆ ಸಂಸ್ಕಾರವೇ ಇಲ್ಲ: ಮೊಯ್ಲಿ

ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಅಭಿವೃದ್ಧಿ, ಕುವೆಂಪು ಸ್ಮಾರಕ, ಬೇಂದ್ರೆ ಸ್ಮಾರಕ ಎಲ್ಲವೂ ಮುಚ್ಚುವ ಹಂತದಲ್ಲಿದೆ.ಇದರ ಅಭಿವೃದ್ಧಿಗೆ ಅನುದಾನ ನೀಡುವಂತೆ ಸಂಸ್ಕೃತಿ ಸಚಿವರಿಗೆ‌ ಮನವಿ ಮಾಡಿದರೂ ನಯಾಪೈಸೆ ಬಿಡುಗಡೆ ಮಾಡಿಲ್ಲ, ಕಾರ್ಕಳ ಶಾಸಕರಿಗೆ ಸಂಸ್ಕಾರವೇ ಇಲ್ಲವೆನ್ನುವುದು ಸಾಬೀತಾಗಿದೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು. ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಅಧಿಕಾರಕ್ಕೆ ಬಂದವರು ಉದ್ಯೋಗ ಕಡಿತಗೊಳಿಸುತ್ತಿದ್ದಾರೆ ಎಂದು ಮೊಯ್ಲಿ ಹೇಳಿದರು.

ಬಿಜೆಪಿಯವರಿಂದ ದೇಶಭಕ್ತಿ ಪಾಠ ಕಲಿಯಬೇಕಿಲ್ಲ: ರಾಕೇಶ್ ಶೆಟ್ಟಿ

ಧರ್ಮ, ದೇಶಭಕ್ತಿ ಎಂದಾಗ ಬಿಜೆಪಿಯವರು ಗುತ್ತಿಗೆ ಪಡೆದಂತೆ ವರ್ತಿಸುತ್ತಾರೆ ಆದರೆ ದೇಶಭಕ್ತಿಯ ಬಗ್ಗೆ ಬಿಜೆಪಿಯವರಿಂದ ಪಾಠ ಕಲಿಯಬೇಕಿಲ್ಲ ಎಂದು ಪವರ್ ಟಿವಿ ಸುದ್ದಿವಾಹಿನಿಯ ಮುಖ್ಯಸ್ಥ ರಾಕೇಶ್ ಶೆಟ್ಟಿ ಹೇಳಿದರು.

ಬಿಜೆಪಿಯಲ್ಲಿ ದೇಶ ಮೊದಲು ವ್ಯಕ್ತಿ ಮೊದಲಲ್ಲ ಎನ್ನುವುದು ಸಿದ್ದಾಂತ,ಆದರೆ ಕಾರ್ಕಳದ ಬಿಜೆಪಿ ಭಕ್ತರ ಮನಸ್ಸಿನಲ್ಲಿ ಈಗ ವ್ಯಕ್ತಿ ಮೊದಲು ದೇಶ ನಂತರ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದು ರಾಕೇಶ್ ಶೆಟ್ಟಿ ಕುಟುಕಿದರು. ಕಾರ್ಕಳದಲ್ಲಿ ಭ್ರಷ್ಟಾಚಾರ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲಿನ ದರ್ಪ ಮಿತಿಮೀರಿದೆ ಎಂದು ಸುನಿಲ್ ಕುಮಾರ್ ಅವರ ಗುರು ಪ್ರಮೋದ್ ಮುತಾಲಿಕ್ ಅವರೇ ದಾಖಲೆ ಸಹಿತ ಆರೋಪಿಸಿದ್ದಾರೆ.ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರೇ ಬದಲಾವಣೆ ಬಯಸಿದ್ದಾರೆ, ಆದ್ದರಿಂದ ಸರಳ ವ್ಯಕ್ತಿತ್ವದ ಉದಯ ಶೆಟ್ಟಿ ಗೆಲುವು ನಿಶ್ಚಿತ ಎಂದು ರಾಕೇಶ್ ಶೆಟ್ಟಿ ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ, ಕೇರಳ ಕಾಂಗ್ರೆಸ್ ಮುಖಂಡ ಪ್ರತಾಪನ್, ಹರ್ಷ ಮೊಯ್ಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ್,ಜಿ.ಎ ಬಾವಾ, ದೇವಿಪ್ರಸಾದ್ ಶೆಟ್ಟಿ, ದೀಪಕ್ ಕೋಟ್ಯಾನ್, ಗಿರೀಶ್ ಶೆಟ್ಟಿ ಕುಡುಪುಲಾಜೆ, ಚಂದ್ರಶೇಖರ ಬಾಯರಿ, ಸದಾಶಿವ ದೇವಾಡಿಗ, ಡಿ,ಅರ್ ರಾಜು, ನೀರೆ ಕೃಷ್ಣ ಶೆಟ್ಟಿ, ಎಂ.ಎ ಗಫೂರ್, ಮಂಜುನಾಥ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ನ್ಯಾಯವಾದಿ ಶೇಖರ್ ಮಡಿವಾಳ ಸ್ವಾಗತಿಸಿದರು. ಕಾರ್ಕಳ ನಗರ ಪ್ರಚಾರ ಸಮಿತಿ ಅಧ್ಯಕ್ಷ ಶುಭದ್ ರಾವ್ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮೊದಲು ಕಾರ್ಕಳದ ಸ್ವರಾಜ್ಯ ಮೈದಾನದಿಂದ ಹೊರಟ ಕಾಂಗ್ರೆಸ್ ಕಾಲ್ನಡಿಗೆ ಜಾಥಾ ಬಂಡಿಮಠ ಬಸ್ ನಿಲ್ದಾಣದಲ್ಲಿ ಸಮಾಪನಗೊಂಡಿತು. ಸುಮಾರು 10 ಸಾವಿರಕ್ಕೂ ಮಿಕ್ಕಿ ಕಾರ್ಯಕರ್ತರು ಜಾಥಾದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *