Share this news

ಕಾರ್ಕಳ: ಒಬ್ಬ ಜನಪ್ರತಿನಿಧಿಯಾಗಿ ನಾಲ್ಕು ಬಾರಿ ಆಯ್ಕೆಯಾಗಿ ಜನಸೇವೆ ಮಾಡಿದ ಶಾಸಕರಿಗೆ, ಅಧಿಕಾರಗಳ ಸಭೆಯನ್ನು ಎಲ್ಲಿ ಯಾವಾಗ ಮಾಡಬೇಕು ಎನ್ನುವುದು ಚೆನ್ನಾಗಿ ತಿಳಿದಿದೆ. ಒಬ್ಬ ಗ್ರಾಮ ಪಂಚಾಯತ್ ಸದಸ್ಯನ ಅರ್ಹತೆಯೂ ಇಲ್ಲದ ಕಾಂಗ್ರೆಸ್ಸಿನ ಪ್ರತಿನಿಧಿ ಸರ್ಕಾರಿ ಆಸ್ಪತ್ರೆಯಲ್ಲಿ ಕಾನೂನು ಬಾಹಿರವಾಗಿ ರಿವೀವ್ಯು ಸಭೆ ನಡೆಸಿದ ನಿಮ್ಮಂತವರಿAದ ಪಾಠಕಲಿಯಬೇಕಾಗಿಲ್ಲ ಎಂದು ಕಾರ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ಕಿಡಿಕಾರಿದ್ದಾರೆ.

ಅಂದು ಕಾಂಗ್ರೆಸ್ಸಿನ ಸುದೀರ್ಘ ಆಡಳಿತಾವಧಿಯಲ್ಲಿ ಕಾರ್ಕಳ ಸರ್ಕಾರಿ ಆಸ್ಪತ್ರೆ ಯಾವುದೇ ಸೂಕ್ತ ವ್ಯವಸ್ಥೆಗಳಿಲ್ಲದೆ, ಕಟ್ಟಡಗಳಿಲ್ಲದೆ, ಸ್ವಚ್ಛತೆಯು ಸಹ ಇಲ್ಲದೆ ಅನಾಥವಾಗಿ ಬಿದ್ದಿದ್ದು, ಜನರು ಆಸ್ಪತ್ರೆಯ ಕಡೆ ತಿರುಗಿಯೂ ನೋಡದ ಸಮಯದಲ್ಲಿ ಯಾವೊಬ್ಬ ಕಾಂಗ್ರೆಸ್ಸಿನ ನಾಯಕನೂ ಆಸ್ಪತ್ರೆಯ ಕಡೆ ಸುಳಿಯಲಿಲ್ಲ. ಈಗ ಬಿಜೆಪಿಯ ಆಡಳಿತಾವಧಿಯಲ್ಲಿ ಶಾಸಕ ಸುನಿಲ್ ಕುಮಾರ್ ರವರ ನಾಯಕತ್ವದಲ್ಲಿ ನೂತನ ಆಸ್ಪತ್ರೆಯ ಕಟ್ಟಡ, ಸುಸಜ್ಜಿತ ಐಸಿಯು, ಆಕ್ಸಿಜನ್ ಘಟಕ ಈ ರೀತಿ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದರೂ, ಇಂದು ಕಾರ್ಕಳ ಕಾಂಗ್ರೆಸ್ ಸರ್ಕಾರಿ ಆಸ್ಪತ್ರೆಯ ವಿಚಾರವಾಗಿ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿರುವುದು ವಿಷಾದನೀಯ. ಈಗ ಆಸ್ಪತ್ರೆಯ ವಿಚಾರವಾಗಿ ನಾಟಕೀಯ ಕಾಳಜಿ ತೋರುವ ಕಾಂಗ್ರೆಸ್ಸಿಗರು ಕೋರೋನ ಸಂದರ್ಭದಲ್ಲಿ ಜನರ ಕಣ್ಣಿಗೂ ಕಾಣಿಸದೆ ಇದ್ದುದ್ದು ಮಾತ್ರ ವಿಪರ್ಯಾಸ ಎಂದಿದ್ದಾರೆ.

ಕೊರೋನಾ ಸಂದರ್ಭದಲ್ಲಿ ಇಡೀ ಉಡುಪಿ ಜಿಲ್ಲೆಯಲ್ಲಿಯೇ ಕಾರ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಸೇವೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿತ್ತು ಎನ್ನುವುದನ್ನು ಕಾಂಗ್ರೆಸ್ಸಿಗರಿಗೆ ಬಹುಶ ಅರಗಿಸಿಕೊಳ್ಳಲು ಸಾಧ್ಯವಾಗಲಿಕ್ಕಿಲ್ಲ .ಪ್ರತಿ ತಿಂಗಳು ಆಸ್ಪತ್ರೆಗೆ ಭೇಟಿ ನೀಡುತ್ತೇವೆ, ಸಾಧ್ಯವಾದರೆ ತಡೆಯಿರಿ ಎಂದು ಬಿಜೆಪಿಗೆ ಸವಾಲು ಹಾಕುವ ಕಾರ್ಕಳ ಕಾಂಗ್ರೆಸ್ಸಿಗರೇ ಮೊದಲು, ನೀವೇ ನೀಡಿದ ಆಶ್ವಾಸನೆಗಳನ್ನು ತಕ್ಷಣವೇ ಈಡೇರಿಸುವಂತೆ ನಿಮ್ಮದೇ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿ ನಿಮ್ಮ ತಾಕತ್ತು ಏನೆಂಬುದನ್ನು ತೋರಿಸಿ ಎಂದು ನವೀನ್ ನಾಯಕ್ ಕಾಂಗ್ರೆಸಿಗರಿಗೆ ಸವಾಲು ಹಾಕಿದ್ದಾರೆ.

Leave a Reply

Your email address will not be published. Required fields are marked *