ಬೆಂಗಳೂರು: ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ನೌಕೆ ಈಗಾಗಲೇ ತನ್ನ ನಿಗದಿತ ಪ್ರಯಾಣದಲ್ಲಿ ಮೂರನೇ ಎರಡಷ್ಟು ಹಾದಿ ಕ್ರಮಿಸಿದ್ದು, ಶನಿವಾರ ಸಂಜೆ ಚಂದ್ರನ ಕಕ್ಷೆಗೆ ಸೇರ್ಪಡೆಯಾಗಲಿದೆ. ಆ.1ರಂದು ಭೂಮಿಯ ಕಕ್ಷೆಯಿಂದ ಹೊರಕ್ಕೆ ಜಿಗಿದು ಚಂದ್ರನತ್ತ ಪ್ರಯಾಣ ಆರಂಭಿಸಿದ್ದ ಚಂದ್ರಯಾನ ನೌಕೆ, ಇದೀಗ ಚಂದ್ರನ ಕಕ್ಷೆಯನ್ನು ಸೇರಲು ಕ್ಷಣಗಣನೆ ಆರಂಭವಾಗಿದೆ.
ಜು.14ರAದು ಶ್ರೀಹರಿಕೋಟಾದಿಂದ ನಭಕ್ಕೆ ನೆಗೆದಿದ್ದ ಚಂದ್ರಯಾನ-3 ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸುವ ಲೂನಾರ್ ಆರ್ಬಿಟ್ ಇಂಜೆಕ್ಷನ್ ಪ್ರಕ್ರಿಯೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಆ.5ರ ಸಂಜೆ 7 ಗಂಟೆಯ ಮುಹೂರ್ತ ನಿಗದಿಪಡಿಸಿದೆ. ಚಂದ್ರನ ಕಕ್ಷೆಗೆ ಅತ್ಯಂತ ಸನಿಹದಲ್ಲಿ ನೌಕೆ ಇರುವ ಕ್ಷಣ ನೋಡಿಕೊಂಡು ಲೂನಾರ್ ಆರ್ಬಿಟ್ ಇಂಜೆಕ್ಷನ್ (ಚಂದ್ರನ ಕಕ್ಷೆ ಸೇರುವ ಪ್ರಕ್ರಿಯೆ) ಕೈಗೊಳ್ಳಲಾಗುತ್ತದೆ ಎಂದು ಇಸ್ರೋ ತಿಳಿಸಿದೆ. ಬಳಿಕ ಆ.23ರಂದು ಚಂದ್ರನ ಮೇಲೆ ಲ್ಯಾಂಡರ್ ಇಳಿಸಲು ಪ್ರಯತ್ನಿಸಲಾಗುತ್ತದೆ. ಚಂದ್ರನ ನೆಲದ ಮೇಲೆ ಲ್ಯಾಂಡರ್ ಇಳಿದ ಮೇಲೆ ಅದರಿಂದ ಹೊರಬರುವ ರೋವರ್ ಉಪಕರಣವು ಚಂದ್ರನ ಮೇಲೆ ಅಧ್ಯಯನ ನಡೆಸಲಿದೆ.
ಜು.14ರಂದು ಶ್ರೀಹರಿಕೋಟದಿಂದ ಉಡ್ಡಯನಗೊಂಡು 17 ದಿನಗಳಿಂದ ಭೂಮಿಯ ವಿವಿಧ ಕಕ್ಷೆಯಲ್ಲಿ ಸುತ್ತುತ್ತಿದ್ದ ಚಂದ್ರಯಾನ -3 ನೌಕೆ, ಜುಲೈ 31ರ ತಡರಾತ್ರಿ ಭೂಮಿಯ ಕಕ್ಷೆಯನ್ನು ಬಿಟ್ಟು ಚಂದ್ರನತ್ತ ತನ್ನ ಪ್ರಯಾಣ ಬೆಳೆಸಿತು. ಇದರೊಂದಿಗೆ ಚಂದ್ರಯಾನ-3 ಮತ್ತೊಂದು ಮಹತ್ವದ ಘಟ್ಟ ತಲುಪಿತು. ಜುಲೈ 31ರ ತಡರಾತ್ರಿ 12ರಿಂದ 1 ಗಂಟೆಯ ವೇಳೆಗೆ ಚಂದ್ರಯಾನ ನೌಕೆಯನ್ನು ಚಿಮ್ಮಿಸುವ ಮೂಲಕ ಚಂದ್ರನತ್ತ ತೂರಿ ಬಿಡಲಾಯ್ತು. ನೌಕೆಯಲ್ಲಿನ ಇಂಧನವನ್ನು ಬಳಸಿಕೊಂಡು ಅದರ ವೇಗೋತ್ಕರ್ಷವನ್ನು ಹೆಚ್ಚಿಸಿ ಟ್ರಾನ್ಸ್ ಲೂನಾರ್ ಇಂಜೆಕ್ಷನ್ (ಟಿಎಲ್‌ಐ) ಎಂಬ ಪ್ರಕ್ರಿಯೆಯನ್ನು ಇಸ್ರೋ ವಿಜ್ಞಾನಿಗಳ ತಂಡ ಯಶಸ್ವಿಯಾಗಿ ನಡೆಸಿತ್ತು. ಆ.5ಕ್ಕೆ ಚಂದ್ರನ ಕಕ್ಷೆಗೆ ಸೇರ್ಪಡೆಗೊಂಡು, ಚಂದ್ರನ ಸುತ್ತ ಸುತ್ತಲು ಆರಂಭಿಸಲಿದೆ. ನಂತರ ಆ.23ರಂದು ಚಂದ್ರನ ಮೇಲೆ ಲ್ಯಾಂಡರ್ ಇಳಿಸುವ ಪ್ರಯತ್ನವನ್ನು ಇಸ್ರೋ ಮಾಡಲಿದೆ.