ಲೇಖನ: ಪ್ರಶಾಂತ್ ಭಟ್, ಕೋಟೇಶ್ವರ
ನಾಗಬನ ಅಂದ್ರೆ ಒಂದಷ್ಟು ದಟ್ಟ ಮರಗಿಡಗಳ, ಬಳ್ಳಿಗಳ ಮಧ್ಯೆ ಇರುವಂತದ್ದು ಅಲ್ಲಿ ಮರಗಳ ದಟ್ಟತೆ ನೆಲಕ್ಕೆ ಸೂರ್ಯನ ಬೆಳಕು ಬೀಳದಷ್ಟು ಇರುತ್ತದೆ. ಅದು ಎಷ್ಟೇ ಬಿಸಿಲಿದ್ದರೂ ತಂಪಾಗಿರುತ್ತದೆ. ಇಂತಹ ಬನದ ಮರಗಳನ್ನು ಯಾವುದೇ ಕಾರಣಕ್ಕೂ ಕಡಿಯುದು ನಿಷಿದ್ಧ! ಅದೆಲ್ಲೋ ಗದ್ದೆಗೆ ಬಾಗಿಕೊಂಡಿರುವ ಉಳುಮೆಗೆ ತೊಂದರೆ ಕೊಡುವ ಬನದ ಮರದ ಗೆಲ್ಲುಗಳನ್ನು ಕಡಿಯುತ್ತಾರೆ ಬಿಟ್ರೆ ಬುಡದಿಂದ ಮರಗಳನ್ನು ಕಡಿಯುದಾಗಲಿ, ಹಾರೆ ಪಿಕ್ಕಾಸು ಹಿಡಿದು ಬನದಲ್ಲಿ ಮಣ್ಣು ಅಗೆಯುವ ಕೆಲಸ ಮಾಡುವುದಾಗಲಿ ಮಾಡುವುದಿಲ್ಲ. ಹೆಚ್ಚಾಗಿ ಎಲ್ಲಾ ಸಾಂಪ್ರದಾಯಿಕವಾದ ನಾಗ ಬನದಲ್ಲಿ ನೆಲದ ಮೇಲೆಯೇ ಕಲ್ಲುಗಳು ಇರುತ್ತದೆ. ಅದು ನೋಡಲೂ ಚಂದ ಅಲ್ಲಿರುವ ನಾಗಗಳಿಗೂ ಅದರಿಂದ ಒಳ್ಳೇದು….
ಆದರೆ ಇತ್ತೀಚಿಗೆ ಜನರು ನಾಗ ಬನದಲ್ಲಿರುವ ಮರಗಳನ್ನು ಎಲ್ಲಾ ಕಡಿದು ನೆಲದ ಮೇಲಿದ್ದ ನಾಗನ ಕಲ್ಲುಗಳನ್ನು ಸಿಮೆಂಟಿನ ಕಟ್ಟೆ ಮಾಡಿ, ಅದರ ಮೇಲೆ ಪ್ರತಿಷ್ಠಾಪನೆ ಮಾಡ್ತಿದ್ದಾರೆ. ಇದು ತಿಳುವಳಿಕೆ ಇದ್ದೋ ಅಥವಾ ತಿಳುವಳಿಕೆ ಇಲ್ಲದೆಯೋ ಗೊತ್ತಿಲ್ಲ. ಸಿಮೆಂಟಿನ ಕಟ್ಟೆಯ ಮೇಲೆ ನಾಗ ಬರುತ್ತದೆಯೇ ಎಂದು ಕೇಳಿದರೆ ಉತ್ತರ ಇಲ್ಲ! ಸಿಮೆಂಟಿನ ಕಟ್ಟೆ ತಂಪಾಗಿ ಇರುತ್ತದೆಯೇ? ನಾಗನಿಗೆ ಹುಂಚ ಮತ್ತು ತಂಪಾದ ಬನದ ನೆಲವೇ ಪ್ರಿಯ. ಹಾಗಿರುವಾಗ ನಮ್ಮ ಭಕ್ತಿಯ ಆಡಂಬರಕ್ಕೆ ಪೂಜೆ ಮಾಡಲು ಸಮಸ್ಯೆ ಆಗ್ಬಾರ್ದು ಅಂತ ಬನ ಕಡಿದು ಕಟ್ಟೆ ಮಾಡಿ ಅದಕ್ಕೊಂದು ಕಾಂಪೌಂಡ್ ಮಾಡಿ, ಮಳೆಗೆ ಸಮಸ್ಯೆ ಆಗ್ಬಾರ್ದು ಅಂತ ಎದುರಿಗೊಂದು ಶೀಟ್ ಹಾಕಿ ಮಾಡು ಮಾಡಿದರೆ ಅದನ್ನು ಬನ ಅಂತ ಹೇಗೆ ಕರೆಯುವುದು?
ಬನ ಅಂತ ಕರೆಸಿಕೊಳ್ಳಬೇಕು ಅಂದ್ರೆ ಆ ಜಾಗಕ್ಕೆ ಒಂದಷ್ಟು ಅದರದ್ದೇ ಆದ ಲಕ್ಷಣಗಳು ಇರಬೇಕು ಅಲ್ವೇ??
ಪ್ರಕೃತಿಯನ್ನು ಈ ಲೋಕದ ಸರ್ವ ಜೀವರಾಶಿಗಳನ್ನು ಗೌರವಿಸಬೇಕು ಎಂಬ ಪಾಠವನ್ನು ನಾಗರ ಬನ ನಮಗೆ ಕಲಿಸುತ್ತದೆ, ಪ್ರಕೃತಿ ಇಲ್ಲದೆ ಏನೂ ಇಲ್ಲ, ಪ್ರಕೃತಿಯ ಹೊರತಾಗಿ ಮಾನವ ಶೂನ್ಯ . ಹೀಗಾಗಿ ಪ್ರಕೃತಿಯನ್ನು ಆರಾಧಿಸುವ ವಿಧಾನವೇ ನಾಗ ಮತ್ತು ದೈವಗಳ ಪೂಜೆ. ನಮ್ಮ ಹಿರಿಯರು ನಡೆಸಿಕೊಂಡು ಬಂದ ಸಾಂಪ್ರದಾಯಿಕ ನಾಗ ಬನಗಳು ತುಂಬಾ ಪವಿತ್ರವಾದದ್ದು. ನಾವು ಬನವನ್ನು ಅಭಿವೃದ್ಧಿ ಮಾಡುವಾಗ ಆ ಹಳೆಯತನವನ್ನು ಉಳಿಸಿಕೊಂಡು ಮುಂದುವರೆಯೋಣ. ಬನಗಳು ಬನದಂತೆಯೇ ಇರಲಿ ಆದಷ್ಟು ಸಿಮೆಂಟಿನ ಕಟ್ಟೆಯ ಆಡಂಬರದಿಂದ ದೂರ ಇರೋಣ. ಬನ ನಾಗನಿಗಾಗಿಯೇ ಹೊರತು ಮನುಷ್ಯರಿಗಲ್ಲ ಅನ್ನೋದನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು……