ಕಾರ್ಕಳ: ಕಳೆದ ನ.28 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಾರ್ಕಳ ಜೋಡುರಸ್ತೆಯ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆಕೆಯ ಆತ್ಮಹತ್ಯೆಗೆ ಗಂಡನ ಮನೆಯವರ ಕಿರುಕುಳವೇ ಕಾರಣ ಎಂದು ಆರೋಪಿಸಿ ಮೃತಳ ಸಹೋದರಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ರೆಂಜಾಳದ ಮೈಮುನಾ ಎಂಬವರನ್ನು ಕಾರ್ಕಳ ಕಸಬಾ ಗ್ರಾಮದ ಜೋಡುರಸ್ತೆಯ ಮಹಮ್ಮದ್ ರಿಜ್ವಾನ್ ನೊಂದಿಗೆ 2017ರಲ್ಲಿ ವಿವಾಹ ಮಾಡಿಕೊಡಲಾಗಿತ್ತು. ಮದುವೆಯ ಬಳಿಕ ಮೈಮುನಾ ತನ್ನ ಗಂಡ ಮಹಮ್ಮದ್ ರಿಜ್ವಾನ್, ಮಾವ ಮೊಹಮ್ಮದ್ ಶರೀಫ್, ಅತ್ತೆ ನೂರ್‌ಜಾನ್ ರೊಂದಿಗೆ ಒಂದೇ ಮನೆಯಲ್ಲಿದ್ದರು. ಅಲ್ಲಿ ತನ್ನ ಮಾವ ಮತ್ತು ಅತ್ತೆ ಪ್ರತಿದಿನ ಜಗಳವಾಡಿ, ಮನೆ ಬಿಟ್ಟು ಹೋಗುವಂತೆ ಹಿಂಸೆ ನೀಡುತ್ತಿದ್ದಾರೆಂದು ತನ್ನ ಸಹೋದರಿ ರಶೀದಾ ಬಾನು ಮತ್ತು ತವರು ಮನೆಯವರಲ್ಲಿ ತಿಳಿಸಿದ್ದಳು. ಅಲ್ಲದೇ 4 ವರ್ಷಗಳ ಹಿಂದೆ ಅತ್ತೆಯ ಅಣ್ಣನಾದ ಅಬ್ದುಲ್ ಖಾದರ್, ಮಜೀದ್, ಸಿರಾಜ್‌ನ ಹೆಂಡತಿ ರಫಾತ್ ಮೈಮೂನಾಳಿಗೆ ಚೂರಿ ಹಾಕಿ ಸಾಯಿಸಿ ಜೈಲಿಗೆ ಹೋಗಿ ಬರುತ್ತೇವೆ ಎಂದು ಬೆದರಿಕೆ ಹಾಕಿರುವುದಾಗಿ ಪೋನ್‌ನಲ್ಲಿ ತಿಳಿಸಿದ್ದಳು.
ನಂತರ ನ.28 ರಂದು ತನ್ನ ಅತ್ತೆಯ ಅಕ್ಕ ಮೆಹರುನ್ನಿಸಾ ಮತ್ತು ಅವರ ಮಗಳಾದ ದಿಲ್‌ಷಾದ್ ಮನೆಯವರೊಂದಿಗೆ ಸೇರಿಕೊಂಡು ಜಗಳ ಮಾಡಿದ್ದರಿಂದ ಮೈಮುನಾ ಬಾಡಿಗೆ ಮನೆ ಮಾಡಿದ್ದರು. ಆದರೆ ಪತಿಯು ತನ್ನೊಂದಿಗೆ ಬಾಡಿಗೆ ಮನೆಗೆ ಬರದ ಹಿನ್ನಲೆಯಲ್ಲಿ ಮೈಮುನಾ ಗಂಡನನ್ನು ಕರೆತರಲು ಅತ್ತೆಯ ಮನೆಗೆ ಹೋಗಿದ್ದ ವೇಳೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಕೂಡಲೇ ಆಕೆಯ ಪತಿ ಮೈಮುನಾಳನ್ನು ಚಿಕಿತ್ಸೆಗಾಗಿ ಕಾರ್ಕಳ ಸಿಟಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ವೈದ್ಯರು ಚಿಕಿತ್ಸೆ ನೀಡಿದ್ದು, ಇನ್ನೂ ಹೆಚ್ಚಿನ ಚಿಕಿತ್ಸೆಗಾಘಿ ಬಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಲ್ಲಿಯೂ ಚಿಕಿತ್ಸೆಗೆ ಸ್ಪಂದಿಸದ ಮೈಮುನಾ ಡಿ.2 ಸೋಮವಾರ ಮೃತಪಟ್ಟಿದ್ದಾರೆ.
ಈ ಕುರಿತು ಮೈಮುನಾ ಸಹೋದರಿ ರಶೀದಾ ಬಾನು ನೀಡಿದ ದೂರಿನಂತೆ ಕಾರ್ಖಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.