ಕಾರ್ಕಳ: ಬಿಜೆಪಿಯ ಡಬಲ್ ಇಂಜಿನ್ ಆಡಳಿತವನ್ನು ಕಾಂಗ್ರೆಸ್‌ನ 70 ವರ್ಷದ ಸುವರ್ಣ ಯುಗದೊಂದಿಗೆ ಹೋಲಿಸುವುದು ಹಾಸ್ಯಾಸ್ಪದ.ಭಾರತವನ್ನು ಅಭಿವೃದ್ಧಿಶೀಲ ಪಟ್ಟಿಯಿಂದ 196ನೇ ಸ್ಥಾನಕ್ಕೆ ಇಳಿಸಿರುವುದೇ ಡಬ್ಬಲ್ ಇಂಜಿನ್ ಸರ್ಕಾರದ ಸಾಧನೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ ಪಾಲ್ ಬಿಪಿನ್ ಚಂದ್ರ ಪಾಲ್ ಹೇಳಿದ್ದಾರೆ.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಸದ ತೇಜಸ್ವಿಸೂರ್ಯ ಅವರ ಹೇಳಿಕೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ರಸ್ತೆಗೆ ಡಾಮಾರು, ಜಲ್ಲಿ ಹಾಕಲು, ಬೀದಿಬದಿ ಪಕೋಡಾ ಮಾರಲು ಉದ್ಯೋಗವನ್ನು ಸೀಮಿತಗೊಳಿಸಿರುವ ಬಿಜೆಪಿ ನಾಯಕರಿಗೆ, ಬಡತನದ ಅನುಭವವಿಲ್ಲ, ನಿರುದ್ಯೋಗದ ಗಂಭೀರತೆಯ ಅರಿವಿಲ್ಲ.ಬಿಜೆಪಿಯ ಆಡಳಿತ ಮತ್ತು ಆರ್ಥಿಕ ನೀತಿಯಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ವರ್ಷಕ್ಕೆ 2ಕೋಟಿ ಜನ ಕೆಲಸ ಕಳೆದುಕೊಳ್ಳುತ್ತಿದ್ದು, ಅಭಿವೃದ್ದಿ ಎನ್ನುವುದು ವರ್ತಮಾನದ ಪರಿಸ್ಥಿತಿಯಲ್ಲಿ ಮರೀಚಿಕೆಯಾಗಿದೆ. ದೇಶದ ಯುವ ವಿದ್ಯಾವಂತ (ಉನ್ನತ ತಾಂತ್ರಿಕ ವೈದ್ಯಕೀಯ) ಉದ್ಯೋಗಾಕಾಂಕ್ಷಿಗಳ ಶೇ. 42 ರಷ್ಠು ಮಂದಿ ಅನ್ಯದೇಶಗಳಿಗೆ ವಲಸೆ ಹೋಗುತ್ತಿರುವುದು ದೇಶದ ದೌರ್ಭಾಗ್ಯ. ಬಹುಶ ಇದನ್ನು ಅರ್ಥಮಾಡಿ ಜೀರ್ಣಿಸುವ ಶಕ್ತಿ ಈ ಬಿಜೆಪಿ ನಾಯಕರಿಗಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿಗೆ ರಾಜಧರ್ಮದ ಕನಸು ಬೀಳುತ್ತಿದೆ. ಈ ದೇಶದ ಮತದಾರ ಕೊಡುವ ಒಂದೊAದು ಮತ ಈ ದೇಶದ ಸಮಗ್ರತೆ ಸೌಹಾರ್ದತೆ ಮತ್ತು ಅಭಿವೃದ್ಧಿಯನ್ನು ಎತ್ತಿ ಹಿಡಿಯಬಲ್ಲ ರಾಷ್ಟ್ರೀಯ ಶಕ್ತಿಯಾಗಿ ಹೊರಹೊಮ್ಮಬೇಕೆ ಹೊರತು ಅದು ದೇಶದ ಆಂತರಿಕ ಸೌಹಾರ್ದತೆಯನ್ನು ಕೆಡಿಸುವ ಪ್ರಜಾತಂತ್ರ ವಿರೋಧಿ ಮನುವಾದಿ ಶಕ್ತಿಗಳನ್ನು ಪ್ರೋತ್ಸಾಹಿಸುವಂತಿರಬಾರದು.
ಆ ನಿಟ್ಟಿನಲ್ಲಿ ಈ ದೇಶದ ಬುದ್ಧಿವಂತ ಮತದಾರ ಮುಂದಿನ ಚುನಾವಣೆಗಳಲ್ಲಿ ದೇಶವನ್ನು ಬಿಜೆಪಿಯ ಜನವಿರೋಧಿ ಆಡಳಿತದಿಂದ ಮುಕ್ತವಾಗಿಸಲಿದ್ದಾರೆ. ಸಚಿವ ಸುನೀಲ್ ಕುಮಾರ್ ಪ್ರೋಗ್ರೆಸ್ ಕಾರ್ಡ್ ತಿದ್ದುವುದರಲ್ಲಿ ಜಾಣರೆಂದು ಈ ಕ್ಷೇತ್ರದ ಜನರಿಗೆ ಈಗಾಗಲೇ ತಿಳಿದಿದೆ. ಅವರ ಅಭಿವೃದ್ದಿ ಪತ್ರದ ಅಸಲಿಯತ್ತನ್ನು ಬಟಾಬಯಲು ಮಾಡಲು ಅವರ ಪಕ್ಷದ “ಬಿ” ಟೀಮ್ ಈಗಾಗಲೇ ಸಿದ್ಧವಾಗಿದೆ. ಕಾಂಗ್ರೆಸ್ ಎಂದಿಗೂ ಅಪಪ್ರಚಾರ ಮಾಡುವುದಿಲ್ಲ, ಅದು ಕೇವಲ ಬಿಜೆಪಿ ಸಂಸ್ಕೃತಿ ಎಂದು ಅವರು ಬಿಜೆಪಿಯನ್ನು ಕುಟುಕಿದ್ದಾರೆ.