ಕಾರ್ಕಳ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಸಚಿವ ಅಶ್ವಥ್ ನಾರಾಯಣ ಆಡಿರುವ ಮಾತು ಖಂಡನೀಯ. ಕೊಲೆಗೆ ಪ್ರಚೋದನೆ ನೀಡುವ ರೀತಿ ಮಾತನಾಡಿರುವ ಸಚಿವರ ಮೇಲೆ ಪ್ರಕರಣ ದಾಖಲಿಸಿ ತಕ್ಷಣ ಬಂಧಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್ ಸರಕಾರವನ್ನು ಆಗ್ರಹಿಸಿದ್ದಾರೆ.
ಶೋಷಿತ ದಲಿತ, ಹಿಂದುಳಿದ, ಮತ್ತು ಅಲ್ಪಸಂಖ್ಯಾತ ವರ್ಗದ ಜನರ ದ್ವನಿಯಾಗಿ ನಿರಂತರ ಹೋರಾಡುತ್ತಾರೆ ಎನ್ನುವ ಒಂದೇ ಕಾರಣಕ್ಕೆ ಅವರನ್ನು ಗುರಿಯಾಗಿಸಿ ಇಂತಹ ಹೇಳಿಕೆಯನ್ನು ನೀಡುತ್ತಿದ್ದಾರೆ. ಹಾಗಾಗಿ ನಾವೆಲ್ಲರೂ ಸಿದ್ದರಾಮಯ್ಯ ಪರವಾಗಿ ಧ್ವನಿ ಎತ್ತುವ ಅಗತ್ಯ ಇದೆ. ತಾನು ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಆರೋಪಕ್ಕೆ ಗುರಿಯಾಗದೆ ಜನತೆಗೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿ ದಾಖಲೆ ಮಟ್ಟದ ಜನಪರ ಯೋಜನೆಗಳನ್ನು ರಾಜ್ಯದಲ್ಲಿ ಜಾರಿ ತಂದ ಕೀರ್ತಿ ಅವರದ್ದು. ಅಂತಹ ನಾಯಕನ ವಿರುದ್ಧ ನೀಡಿರುವ ಹೇಳಿಕೆಯನ್ನು ಮನುಷ್ಯತ್ವ ಇರುವ ಎಲ್ಲರೂ ವಿರೋದಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.