ಕಾರ್ಕಳ: ಫೆಬ್ರವರಿ ತಿಂಗಳಿನಲ್ಲಿ ರಾಜ್ಯ ಸರಕಾರ ಬಜೆಟ್ ಮಂಡಿಸಲಿದ್ದು, ಹೈನುಗಾರರ ಸಂಕಷ್ಟಕ್ಕೆ ಸ್ಪಂದಿಸಿ ಪ್ರತಿ ಲೀಟರಿಗೆ ಕನಿಷ್ಠ 5ರೂ. ಪ್ರೋತ್ಸಾಹ ಧನ ಮತ್ತು ದುಬಾರಿಯಾಗಿರುವ ನಂದಿನಿ ಪಶು ಆಹಾರಕ್ಕೆ ಕೆಜಿಗೆ ಕನಿಷ್ಠ 5.ರೂ ಸಬ್ಸಿಡಿ ಒದಗಿಸಲು ಬಜೆಟ್ ನಲ್ಲಿ ವಿಶೇಷ ಅನುದಾನ ನೀಡುವುದರ ಮೂಲಕ ರಾಜ್ಯದ ಲಕ್ಷಾಂತರ ಕುಟುಂಬಗಳ ಜೀವನೋಪಾಯವಾಗಿರುವ ಹೈನುಗಾರಿಕೆಯನ್ನು ಸಂಕಷ್ಟದಿAದ ಪಾರು ಮಾಡಬೇಕೆಂದು ಅಗ್ರಹಿಸಿ ನಾಳೆ (ಜ.19) ಬೆಳಿಗ್ಗೆ 10 ಗಂಟೆಗೆ ಮಣಿಪಾಲದ ರಜತಾದ್ರಿಯಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಸತ್ಯಾಗ್ರಹ ಕಟ್ಟೆಯಲ್ಲಿ “ಉಡುಪಿ ಜಿಲ್ಲೆಯ ಹೈನುಗಾರ ರೈತರ ಬೃಹತ್ ಜನಾಂದೋಲನ ಸಭೆ” ನಡೆಸಲಾಗುವುದು ಎಂದು ಸಹಕಾರ ಭಾರತಿಯ ರಾಜ್ಯ ಸಂಚಾಲಕರಾದ ಸಾಣೂರು ನರಸಿಂಹ ಕಾಮತ್ ಹೇಳಿದ್ದಾರೆ.

ಹಾಲಿನ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ರೈತರು ಸೊಸೈಟಿಗಳಿಗೆ ಪೂರೈಸುವ ಹಾಲಿನ ದರವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿ ಕಳೆದ ಅ.27ರಂದು ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಬೃಹತ್ ರೈತ ಸಮಾವೇಶವನ್ನು ಆಯೋಜಿಸಿ ಸರಕಾರವನ್ನು ಒತ್ತಾಯಿಸಿ ಅಂಚೆ ಕಾರ್ಡ್ ಚಳವಳಿಯನ್ನು ನಡೆಸಲಾಗಿತ್ತು. ಸರಕಾರಕ್ಕೆ ಉಡುಪಿ ಜಿಲ್ಲಾಧಿಕಾರಿಯವರ ಮೂಲಕ ಮನವಿ ಸಲ್ಲಿಸಿ,ನ.8 ರಂದು ಸಿಎಂ ಬೊಮ್ಮಾಯಿ ಅವರು ಉಡುಪಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಹಕಾರ ಭಾರತಿಯ ಜಿಲ್ಲಾ ನಿಯೋಗ ಮುಖ್ಯಮಂತ್ರಿಗಳಿಗೆ ಹಾಲಿನ ದರ ಏರಿಸುವಂತೆ ಮನವಿಯನ್ನು ಸಲ್ಲಿಸಿತ್ತು.ಸರಕಾರ ಹೈನುಗಾರರ ರೈತರ ಆಕ್ರೋಶಕ್ಕೆ ಮಣಿದು ಪ್ರತಿ ಲೀಟರ್ ಗೆ ಕೇವಲ 2 ರೂ. ದರ ಹೆಚ್ಚಳ ಮಾಡಿತ್ತು.

ಆದರೆ ಹೈನುಗಾರಿಕೆಯ ಖರ್ಚು ವೆಚ್ಚಗಳು, ನಿರಂತರ ಪಶು ಆಹಾರದ ದರ ಏರಿಕೆ, ಕೃಷಿ ಕೂಲಿ ಕಾರ್ಮಿಕರ ಸಂಬಳ ,ಬೈ ಹುಲ್ಲು, ಪಶು ಚಿಕಿತ್ಸೆ, ಔಷಧ ವೆಚ್ಚ, ಸಾಗಾಟ ವೆಚ್ಚ ಎಲ್ಲವೂ ಏರುಗತಿಯಲ್ಲಿ ಸಾಗುತ್ತಿದ್ದು ಈಗಿನ ದರ ಸಾಲುತ್ತಿಲ್ಲ. ಹಾಲಿನ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಹಾಲಿಗೆ ಖರೀದಿ ದರ ಸಿಗದೆ ರಾಜ್ಯಾದ್ಯಂತ ಹೈನುಗಾರರರಲ್ಲಿ ಆತಂಕ ಮತ್ತು ನಿರಾಸಕ್ತಿ ಮೂಡಿದ್ದು, ಹಾಲು ಉತ್ಪಾದನೆಯಲ್ಲಿ ತೀವ್ರ ಕೊರತೆ ಉಂಟಾಗಿದೆ. ಇದರಿಂದ ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು Pತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಕಳೆದ ಎರಡು ಮೂರು ತಿಂಗಳಿನಿAದ ರೈತರ ಸಮಾವೇಶ, ಅಂಚೆ ಕಾರ್ಡ್ ಚಳವಳಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ರಾಜ್ಯದ ಹೈನುಗಾರರಿಂದ ಖರೀದಿಸುವ ಹಾಲಿಗೆ ಕನಿಷ್ಠ 5/- ರೂಪಾಯಿ ಏರಿಸಬೇಕೆಂದು ಸಹಕಾರ ಭಾರತಿ ಹೈನುಗಾರರನ್ನು ಸಂಘಟಿಸಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ದನಗಳಿಗೆ ಚರ್ಮಗಂಟು ರೋಗವು ವ್ಯಾಪಕವಾಗಿ ಹರಡುತ್ತಿದ್ದು, ದನಗಳಿಗೆ ಲಸಿಕೆ ನೀಡಲು ಸರಕಾರದ ಪಶುಸಂಗೋಪನ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಕಂಡು ಬರುತ್ತಿದ್ದು, ಸರಕಾರ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿ ಪಶುಗಳ ಆರೋಗ್ಯ ರಕ್ಷಣೆ ಮತ್ತು ಚರ್ಮಗಂಟು ರೋಗಕ್ಕೆ ಕಡಿವಾಣ ಹಾಕಲು ಸಾಕಷ್ಟು ಪ್ರಮಾಣದಲ್ಲಿ ಔಷಧಿ,ಕೊರತೆ ಇರುವ ಪಶುವೈದ್ಯರು ಮತ್ತು ನುರಿತ ಸಿಬ್ಬಂದಿಗಳನ್ನು ಆದಷ್ಟು ಬೇಗ ತುರ್ತು ನೆಲೆಯಲ್ಲಿ ಒದಗಿಸಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ.

