Share this news

ಕಾರ್ಕಳ: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯನವರ ಸರ್ಕಾರ ದಿವಾಳಿಯಾಗಿದ್ದು, ತನ್ನ ಅವೈಜ್ಞಾನಿಕ ಆರ್ಥಿಕ ನೀತಿಯಿಂದ
ರಾಜ್ಯ ಆರ್ಥಿಕತೆಯು ಪಾತಾಳಕ್ಕೆ ಇಳಿದಿದೆ. ಇದನ್ನು ಸರಿಪಡಿಸಲು ಸಾಧ್ಯವಾಗದೇ ಗ್ಯಾರಂಟಿಗಳನ್ನು ಕೂಡ ನೀಡಲಾಗದೇ ಇದೀಗ ಸರ್ಕಾರವು ಬಡವರ ಬಿಪಿಎಲ್ ಪಡಿತರ ಚೀಟಿ ರದ್ದತಿಗೆ
ಮುಂದಾಗಿದೆ. ರಾಜ್ಯದ ಬಡ ಜನತೆಯ ಪಡಿತರ ಚೀಟಿ ರದ್ಧತಿ ಮಾಡುವ ಮೂಲಕ ಸರ್ಕಾರ 6ನೇ ಭಾಗ್ಯ ನೀಡಿದೆ ಎಂದು ಶಾಸಕ ಸುನಿಲ್ ಕುಮಾರ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಅವರು ಕಾರ್ಕಳದ ಬಜಗೋಳಿಯಲ್ಲಿ ಬಿಜೆಪಿ
ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ,
ರಾಜ್ಯ ಸರ್ಕಾರ ಕೆಲವೊಂದು ತಾಂತ್ರಿಕ ಕಾರಣಗಳನ್ನು ನೀಡಿ ಪಡಿತರ ಚೀಟಿ ನೀಡದಂತೆ ನಿರ್ದೇಶನ ನೀಡಿದೆ. ಇದರಿಂದಾಗಿ ಲಕ್ಷಾಂತರ ಜನ
ಅನ್ನ ಭಾಗ್ಯ ಯೋಜನೆಯಿಂದ ಹಾಗೂ ಆಯುಷ್ಮಾನ್ ಯೋಜನೆಯಿಂದ ವಂಚಿತರಾಗಿದ್ದಾರೆ. ತನ್ನ ಆರ್ಥಿಕ ನೀತಿಯ ವೈಫಲ್ಯವನ್ನು ಸರಿಪಡಿಸಲು ರಾಜ್ಯದ ಜನತೆಯ ಮೇಲೆ ಗಧಾಪ್ರಹಾರ
ಮಾಡುತ್ತಿರುವ ಸರ್ಕಾರ, ಗ್ಯಾರಂಟಿಗಳನ್ನು ಕೊಡಲಾಗದೇ ಹೀಗೆ ತನ್ನ ಜನವಿರೋಧಿ ನೀತಿ ಸಂಕಲ್ಪವನ್ನು ಪರೋಕ್ಷವಾಗಿ ಈಡೇರಿಸುತ್ತಿದೆ. ಈ
ನಿಟ್ಟಿನಲ್ಲಿ ನಾವು ಸರ್ಕಾರದ ಈ ಜನ ವಿರೋಧಿ ನೀತಿ, ಜನರಿಗೆ ಮಾಡಿರುವ ಮೋಸವನ್ನು ರಾಜ್ಯದ ಜನತೆಗೆ ತಿಳಿಸಬೇಕಾಗಿದೆ ಎಂದರು. ಇಡೀ ರಾಜ್ಯ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸ್ವತಃ ಮುಖ್ಯಮಂತ್ರಿಗಳೇ ಮುಡಾ ಹಗರಣದಲ್ಲಿ ಸಿಲುಕಿದ್ದಾರೆ. ಮುಡಾದಿಂದ
ಅಕ್ರಮವಾಗಿ ಪಡೆದಿರುವ 14 ಸೈಟುಗಳನ್ನು ವಾಪಸ್ ನೀಡುವ ಮೂಲಕ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇನ್ನೂ ಅಧಿಕಾರಕ್ಕೆ
ಅಂಟಿಕೊಳ್ಳದೇ, ನೈತಿಕ ಹೊಣೆ ಹೊತ್ತಿಕೊಂಡು ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಹುದ್ದೆಯ
ಘನತೆಯನ್ನು ಕಾಪಾಡಿಕೊಳ್ಳಲಿ ಎಂದರು.
ಈ ಸಭೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ನಾಯಕ್, ಜಿಲ್ಲಾ ಉಪಾಧ್ಯಕ್ಷ ಮಹಾವೀರ್ ಹೆಗ್ಡೆ, ಜಿಲ್ಲಾ ಕಾರ್ಯದರ್ಶಿ ಉದಯ್‌ ಕೋಟ್ಯಾನ್‌, ಕಾರ್ಕಳ ಮಂಡಲದ ಉಪಾಧ್ಯಕ್ಷ ಅನಂತಕೃಷ್ಣ ಶೆಣೈ,
ಮರ್ಣೆ ಶಕ್ತಿ ಕೇಂದ್ರ ಅಧ್ಯಕ್ಷ ಸಂತೋಷ್‌ ಶೆಟ್ಟಿ ಹಿರ್ಗಾನ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *