ಕಾರ್ಕಳ,:ಮುಡಾ ನಿವೇಶನಗಳನ್ನು ಪಡೆದಿದ್ದ ಸಿಎಂ ಪತ್ನಿ ಪಾರ್ವತಿ ಅವರು ಎಲ್ಲಾ ಸೈಟುಗಳನ್ನು ಹಿಂದಿರುಗಿಸುವ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯರ ಪತ್ನಿಯಾಗಿ ರಾಜಧರ್ಮವನ್ನು ಎತ್ತಿ ಹಿಡಿದಿದ್ದಾರೆ. ಇದನ್ನು ವಿಪಕ್ಷಗಳು ಸೋಲಿನ ಭಯದಿಂದ ಶರಣಾಗತಿ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಹಾಗೂ ಜೆಡಿ ಎಸ್ ದ್ವೇಷದ ರಾಜಕೀಯ ಪಾರ್ವತಿಯವರು ತನ್ನ ಪತಿಗಾದ ಅವಮಾನವನ್ನು ಮೆಟ್ಟಿ ನಿಂತು ಅವರ ಗೌರವವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಸತೀದೇವಿಯಾಗಿ ನೀಡಿದ ಆತ್ಮಾಭಿಮಾನದ ಉತ್ತರ. ಬಿಜೆಪಿಯ ದ್ಷೇಷದ ರಾಜಕೀಯದ ಶವಪೆಟ್ಟಿಗೆಗೆ ಹೊಡೆದ ಅಂತಿಮ ಮೊಳೆ. ತನ್ನ ಪತಿಯ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಕೈಯಾಡಿಸದೇ ತನ್ನ ಪಾಡಿಗೆ ತಾನಿದ್ದ ಮುಗ್ಧ ಮಹಿಳೆಯನ್ನು ಅರಸಿನ ಕುಂಕುಮ ಭಾಗ್ಯಕ್ಕೆ ಉಡುಗೊರೆಯಾಗಿ ಬಂದ ಭೂಮಿಯನ್ನೇ ಅಸ್ತ್ರವಾಗಿ ಬಳಸಿ ಅವಳ ತೇಜೋವಧೆ ಮಾಡಲು ಹೊರಟ ಬಿಜೆಪಿ ನಾಯಕರ ಮಾನವೀಯತೆ ಮರೆತ ಸೇಡಿನ ರಾಜಕೀಯ ನಡೆಗೆ ಜನತೆ ಅದರಲ್ಲೂ ಮಹಿಳೆಯರು ಪಕ್ಷಾತೀತ ನೆಲೆಯಲ್ಲಿ ಆತ್ಮಾವಲೋಕನದ ಉತ್ತರ ನೀಡಲಿದ್ದಾರೆ ಎಂದಿದ್ದಾರೆ.
ಕಳ್ಳ ಮಾಲನ್ನು ಹಿಂದಕ್ಕೆ ಕೊಟ್ಟಿದ್ದಾರೆ ಎಂದು ಮೂದಲಿಸಿ ಲೇವಡಿ ಮಾಡುವ, ಪ್ರತಿಪಕ್ಷ ನಾಯಕ ಅಶೋಕ್ ಹಾಗೂ ಬಿಜೆಪಿಯ ಕೆಲವೊಂದು ನಾಯಕರಿಗೆ ಮುಡಾ ಸೈಟುಗಳು ಕಳ್ಳ ಮಾಲಾಗಿ ಕಂಡು ಬಂದಿರುವುದರಲ್ಲಿ ಆಶ್ಚರ್ಯವಿಲ್ಲ. ಭೂಗಳ್ಳತನವನ್ನೇ ರಾಜಕೀಯವಾಗಿಸಿಕೊಂಡು ಅವರು ನಡೆಸಿದ ಭೂಕಳ್ಳತನದ ವಿಸ್ತೃತ ಜಾಲ ಈಗಾಗಲೇ ಬಟಾಬಯಲಾಗಿದ್ದು ಪ್ರಕರಣ ದಾಖಲಾಗಿದೆ. ಇದನ್ನು ಮರೆಮಾಚುವ ನಿಟ್ಟಿನಲ್ಲಿ ಕೇಂದ್ರದ ಮೋದಿ ಸರಕಾರ ಮತ್ತೆ ಮುಡಾ ಪ್ರಕರಣದಲ್ಲಿ ಈಡಿಯನ್ನು ತನಿಖೆಗೆ ಬಳಸಿಕೊಳ್ಳುತ್ತಿದೆ. ಅಂತರ್ ರಾಜ್ಯ ಆರ್ಥಿಕ ಅಪರಾದಗಳ ತನಿಖೆಯ ಅಧಿಕಾರವನ್ನು ಮಾತ್ರ ಹೊಂದಿರುವ ಈಡಿಯನ್ನು ಭೂವಿವಾದಕ್ಕೆ ಎಳೆದು ತಂದಿರುವುದರ ಹಿಂದೆ ಬಿಜೆಪಿಯ ವ್ಯವಸ್ಥಿತ ಪಿತೂರಿಯ ಹುನ್ನಾರವಿದ್ದು ಕಾಂಗ್ರೆಸ್ ಇದರ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಲಿದೆ ಎಂದು ಬಿಪಿನ್ ಚಂದ್ರ ಪಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.