

ಸಾಣೂರು: ರಾಜೇಶ್ವರಿ ಶಿಕ್ಷಣ ಪ್ರತಿಷ್ಠಾನ, ಸಾಣೂರು, ಕಾರ್ಕಳದಲ್ಲಿ ಆಗಸ್ಟ್ 15, 2026ರಂದು 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಭಕ್ತಿಯ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮವು ವಂದೇ ಮಾತರಂ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಫ್ಲಾಗ್ ಪೆರೇಡ್ನೊಂದಿಗೆ ಗಣ್ಯ ಅತಿಥಿಗಳನ್ನು ಸ್ವಾಗತಿಸಲಾಯಿತು. ಬಳಿಕ ಧ್ವಜಾರೋಹಣ ನೆರವೇರಿಸಿ ರಾಷ್ಟ್ರಗೀತೆ ಹಾಗೂ ಧ್ವಜಗೀತೆಯನ್ನು ಹಾಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬ್ರಿಗೇಡಿಯರ್ ಪಿ. ಎನ್. ರೈ ಅವರು ಭಾಗವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣದಲ್ಲಿ, “ನಾವು ಸುಮಾರು 200 ವರ್ಷಗಳ ಕಾಲ ಹೇಗೆ ಗುಲಾಮರಾಗಿ ಉಳಿದೆವು ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರೂ ನಮ್ಮೊಳಗೆ ಕೇಳಿಕೊಳ್ಳಬೇಕು. ದೇಶದ ರಕ್ಷಣೆ ಪ್ರತಿಯೊಬ್ಬ ಭಾರತೀಯನ ಹೊಣೆಗಾರಿಕೆಯಾಗಿದೆ. ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಮಹನೀಯರನ್ನು ಸದಾ ಸ್ಮರಿಸಬೇಕು. ಭಾರತೀಯರೆಂಬ ಹೆಮ್ಮೆ ಪ್ರತಿಯೊಬ್ಬರಲ್ಲೂ ಇರಬೇಕು. ‘ದೇಶ ಮೊದಲು’ ಎಂಬ ಭಾವನೆ ನಮ್ಮೆಲ್ಲರಲ್ಲೂ ಮೂಡಬೇಕು” ಎಂದು ಕರೆ ನೀಡಿದರು.
ದೇಶಭಕ್ತಿ, ಶಿಸ್ತು, ಏಕತೆ ಹಾಗೂ ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರದ ಕುರಿತು ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ದೇವಿಪ್ರಸಾದ್ ಶೆಟ್ಟಿ, ಕಾರ್ಯದರ್ಶಿಗಳಾದ ಶ್ರೀಮತಿ ಶ್ವೇತಾ ಡಿ. ಶೆಟ್ಟಿ, ಪ್ರಾಂಶುಪಾಲರಾದ ಡಾ. ರಶ್ಮಿ ಕೆ., ಮುಖ್ಯೋಪಾಧ್ಯಾಯರಾದ ಪ್ರಣವ್ ಭಟ್, ಚಾವಡಿ ಮನೆ ಜಗನ್ನಾಥ ಶೆಟ್ಟಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಶ್ರೀ ಲಕ್ಷ್ಮಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಅನೀಶ್ ಅವರು ಧನ್ಯವಾದ ಸಮರ್ಪಿಸಿದರು.
ವಿದ್ಯಾರ್ಥಿ ಪರಿಷತ್ ಉದ್ಘಾಟನೆ:
ಸ್ವಾತಂತ್ರ್ಯ ದಿನಾಚರಣೆಯ ನಂತರ ವಿದ್ಯಾರ್ಥಿ ಪರಿಷತ್ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ರಾಜೇಶ್ವರಿ ನ್ಯಾಷನಲ್ ಸ್ಕೂಲ್ನ ಅಧ್ಯಕ್ಷರಾದ ಶ್ರೀ ದೇವಿಪ್ರಸಾದ್ ಶೆಟ್ಟಿ ಅವರು ವಿದ್ಯಾರ್ಥಿ ಪರಿಷತ್ತಿನ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಅತಿಥಿಗಳಾದ ಶ್ರೀ ಈಶ್ವರ್ ಪ್ರಸಾದ್ ಶೆಟ್ಟಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, “ನೀವು ಸೌಲಭ್ಯಗಳನ್ನು ಪಡೆಯಲು ಬಂದವರಲ್ಲ; ಸಾಧ್ಯತೆಗಳನ್ನು ಸೃಷ್ಟಿಸಲು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಲು ಬಂದಿದ್ದೀರಿ” ಎಂದು ಹೇಳಿದರು.
“ಒಂದು ವರ್ಷದಲ್ಲಿ ನಾನು ಯಾವ ಬದಲಾವಣೆಯನ್ನು ತಂದಿದ್ದೇನೆ? ಶಾಲೆಗೆ ಯಾವ ಕೊಡುಗೆಯನ್ನು ನೀಡಿದ್ದೇನೆ?” ಎಂಬುದನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ತಮಗೆ ವಹಿಸಲಾದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ತಮ್ಮ ಅವಧಿಯಲ್ಲಿ ಶಾಲೆಯಲ್ಲಿ ಉತ್ತಮ ಬದಲಾವಣೆಯನ್ನು ತರಬೇಕು ಎಂದು ಅವರು ಸಲಹೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಬಿಜಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೋಟೆಪ್ಪ ಮನಗುಟ್ಟಿ ಅವರು ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಶಿಸ್ತು, ಸಂಸ್ಕಾರ ಹಾಗೂ ಮೌಲ್ಯಗಳನ್ನು ಬೆಳೆಸಿದರೆ ಅವರು ಮುಂದೊಂದು ದಿನ ದೇಶದ ಆಸ್ತಿಯಾಗುತ್ತಾರೆ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಅಗತ್ಯವಾದ ವಿವಿಧ ಸಂಸ್ಕಾರ ಹಾಗೂ ಮೌಲ್ಯಗಳು ಒಂದೇ ಸೂರಿನಡಿ ರಾಜೇಶ್ವರಿ ಶಿಕ್ಷಣ ಪ್ರತಿಷ್ಠಾನದಲ್ಲಿ ದೊರೆಯುತ್ತಿರುವುದು ಎಲ್ಲರ ಭಾಗ್ಯ ಎಂದು ಅವರು ತಿಳಿಸಿದರು.
ವಿಜ್ಞಾನ ವಿಭಾಗದ ಅಧ್ಯಾಪಕಿ ಕುಮಾರಿ ರಿಯಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ಅಪೇಕ್ಷಾ ಅವರು ಧನ್ಯವಾದ ಸಮರ್ಪಿಸಿದರು.
ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷರಾಗಿ ನಂದೀಶ್ ಸುಬ್ರಮಣ್ಯ, ವಿಜ್ಞಾನ ವಿಭಾಗ, ದ್ವಿತೀಯ ಪಿಯುಸಿ ಹಾಗೂ ಉಪಾಧ್ಯಕ್ಷರಾಗಿ ಕುಮಾರಿ ಸುಪ್ರಿಯ, ವಿಜ್ಞಾನ ವಿಭಾಗ, ದ್ವಿತೀಯ ಪಿಯುಸಿ ಆಯ್ಕೆಯಾದರು.
ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀಮತಿ ಶ್ವೇತಾ ಡಿ. ಶೆಟ್ಟಿ, ಪ್ರಾಂಶುಪಾಲರಾದ ಡಾ. ರಶ್ಮಿ ಕೆ., ಮುಖ್ಯೋಪಾಧ್ಯಾಯರಾದ ಪ್ರಣವ್ ಭಟ್, ಬ್ರಿಗೇಡಿಯರ್ ಪಿ. ಎನ್. ರೈ, ಚಾವಡಿ ಮನೆ ಜಗನ್ನಾಥ ಶೆಟ್ಟಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಸನಾತನ ರಾಷ್ಟ್ರಾಂಜಲಿ:
ಕಾರ್ಯಕ್ರಮದ ಕೊನೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ‘ರಾಷ್ಟ್ರದೇವೋಭವ’ ಖ್ಯಾತಿಯ ಸನಾತನ ನಾಟ್ಯಾಲಯ, ಮಂಗಳೂರು ಇವರ ವತಿಯಿಂದ ‘ಸನಾತನ ರಾಷ್ಟ್ರಾಂಜಲಿ’ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದೇಶಭಕ್ತಿ ಹಾಗೂ ಭಾರತೀಯ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸಿದ ಈ ಕಾರ್ಯಕ್ರಮವು ನೆರೆದಿದ್ದವರ ಗಮನ ಸೆಳೆಯಿತು.








.
.
.
.
.
.
.
.
.
.
.
.
.
.
.
.
.
.
.
.
