
ಬೆಳಗಾವಿ(ಸುವರ್ಣ ಸೌಧ),ಡಿ.18 : ಎಟಿಎಂಗೆ ಹಣ ಸಾಗಿಸುತ್ತಿದ್ದ ವಾಹನ ಅಡ್ಡಗಟ್ಟಿ ಹಾಡಹಗಲೇ ದರೋಡೆ, ಚಿನ್ನದ ವ್ಯಾಪಾರಿಯಿಂದ ಚಿನ್ನ ದರೋಡೆ, ಕೋರಮಂಗಲದ ಕಾಲ್ ಸೆಂಟರ್ನ ಉದ್ಯೋಗಿಗಳ ಕಿಡ್ನ್ಯಾಪ್ ಕೇಸ್ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪೊಲೀಸ್ ಸಿಬ್ಬಂದಿಯೇ ಆರೋಪಿಗಳಾಗಿದ್ದಾರೆ. ಇದೀಗ ಕರ್ನಾಟಕದಲ್ಲಿ ಕಳೆದ 3 ವರ್ಷಗಳಲ್ಲಿ 88 ಪೊಲೀಸರು ದರೋಡೆ, ಅಪಹರಣ ಸೇರಿ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ನ ಜೆಡಿಎಸ್ ಸದಸ್ಯ ಶರವಣ ಅವರ ಪ್ರಶ್ನೆಗೆ ಉತ್ತರಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್, ರಾಜ್ಯದಲ್ಲಿ ಕಳೆದ 3 ವರ್ಷಗಳ ಅವಧಿಯಲ್ಲಿ ಹಲವು ಪ್ರಕರಣಗಳಲ್ಲಿ ಒಟ್ಟು 88 ಪೊಲೀಸ್ ಸಿಬ್ಬಂದಿಗಳೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅಂಕಿ-ಅAಶ ಸಹಿತ ಮಾಹಿತಿ ನೀಡಿದ್ದಾರೆ.
ಸಚಿವರ ಉತ್ತರಕ್ಕೆ ಪ್ರತಿಕ್ರಿಯಿಸಿದ ಶರವಣ, ಪೊಲೀಸರೇ ದರೋಡೆ, ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ ಎನ್ನುವುದು ಆತಂಕಕಾರಿ ವಿಚಾರವಾಗಿದೆ. ರಕ್ಷಕರೇ ಭಕ್ಷಕರಾಗುತ್ತಿರುವ ಕಾರಣ ಪೊಲೀಸರ ಮೇಲೆ ಜನ ವಿಶ್ವಾಸವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಅಪರಾಧ ಪ್ರಕರಣದಲ್ಲಿ ಭಾಗಿಯಾದ ಪೊಲೀಸರನ್ನು ಅಮಾನತು ಮಾಡುವುದಲ್ಲ, ಕೆಲಸದಿಂದಲೇ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಶರವಣ ಅವರ ಮಾತಿಗೆ ಉತ್ತರಿಸಿದ ಗೃಹ ಸಚಿವರು, ಅಪರಾಧ ಕೃತ್ಯಗಳಲ್ಲಿ ಪೊಲೀಸರು ಶಾಮೀಲಾಗಿದ್ರೆ ಸುಮ್ಮನೆ ಬಿಡಲ್ಲ. ಅಂಥವರ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮಕೈಗೊಂಡಿದ್ದೇವೆ. ಏನೂ ಮಾಡಿಲ್ಲವೆಂದು ಹೇಳಲು ಹೋಗಬೇಡಿ. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿಮಾಡಿದ್ದೇವೆ. ಪೊಲೀಸರು ಕಟ್ಟುನಿಟ್ಟಾಗಿ ಇರುವುದರಿಂದ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಪೊಲೀಸರನ್ನು ವಜಾ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
.
.
