ಕಾರ್ಕಳ: ಕೆಲವರು ಹಿಂದುತ್ವದ ಹೆಸರು ಹೇಳಿಕೊಂಡು ಸಮಾಜದಲ್ಲಿ ಕೋಮು ಸಂಘರ್ಷದ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದ್ದಾರೆ,ಹಿಂದುತ್ವ ಎಂದರೆ ಯಾರ ವಿರುದ್ಧದ ಹೋರಾಟವಲ್ಲ ಅದು ಜೀವನ ಪದ್ದತಿ ಎಂದು ಕಾರ್ಕಳ ವಿಧಾನಸಭಾ ಚುನಾವಣೆಯ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಮಹೇಶ್ ಶೆಟ್ಟಿ ಕುಡುಪುಲಾಜೆ ಹೇಳಿದ್ದಾರೆ.
ಅವರು ಶನಿವಾರ ಸುನಿಲ್ ಕುಮಾರ್ ಅವರ ವಿಕಾಸ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ,ಹಿಂದುತ್ವ ಎಂದರೆ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ ಎಲ್ಲರೂ ಹಿಂದುಗಳೇ, ನಮ್ಮದು ಅಭಿವೃದ್ಧಿ ಚಿಂತನೆಯುಳ್ಳ ಕಾರ್ಕಳದ ಸುನಿಲ್ ಕುಮಾರ್ ಅವರ ಹಿಂದುತ್ವ ಎಂದು ಮಹೇಶ್ ಶೆಟ್ಟಿ ಸ್ಪಷ್ಟಪಡಿಸಿದರು.
ಭ್ರಷ್ಟಾಚಾರಮುಕ್ತ ಹಾಗೂ ಹಿಂದುತ್ವ ರಕ್ಷಣೆಗಾಗಿ ನನ್ನ ಸ್ಪರ್ಧೆ ಎಂದು ಮುತಾಲಿಕ್ ಹೇಳುತ್ತಿದ್ದಾರೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಹೇಶ್ ಶೆಟ್ಟಿ, ಮುತಾಲಿಕ್ ನಮಗೆ ಲೆಕ್ಕವೇ ಅಲ್ಲ,ಹಿಂದೂಗಳನ್ನು ಒಡೆಯುವುದೇ ಅವರ ಡೋಂಗಿ ಹಿಂದುತ್ವ.ಈ ಹಿಂದೆ ಅನಂತಕುಮಾರ್,ಪ್ರಹ್ಲಾದ್ ಜೋಷಿ ವಿರುದ್ಧವೇ ಸ್ಪರ್ಧಿಸಿ ಸೋತವರಿಂದ ಸುನಿಲ್ ಕುಮಾರ್ ಹಿಂದುತ್ವದ ಪಾಠ ಕಲಿಯಬೇಕಿಲ್ಲ . ಕಾರ್ಕಳದಲ್ಲಿ ಅಭಿವೃದ್ಧಿ ಹಾಗೂ ಹಿಂದುತ್ವಕ್ಕೆ ಜನ ಮತ ನೀಡುತ್ತಾರೆಯೇ ಹೊರತು ಅಪಪ್ರಚಾರಕ್ಕೆ ಬೆಲೆ ನೀಡುವುದಿಲ್ಲ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಶಾಸಕ ಸುನಿಲ್ ಕುಮಾರ್ ಹಾಗೂ ಕಾರ್ಯಕರ್ತರು ಮುಂಬಯಿಂದ ಬಂದವರನ್ನು ಆರೈಕೆ ಮಾಡಿದ್ದಾರೆ,ಹಾಗಾಗಿ ಅವರೆಲ್ಲರೂ ಈ ಬಾರಿ ಸುನಿಲ್ ಕುಮಾರ್ ಪರ ಮತ ಹಾಕಲಿದ್ದಾರೆ ಎಂದರು. ಸುನಿಲ್ ಕುಮಾರ್ 2004ರಿಂದ ಇಂದಿನವರೆಗೂ ಅಭಿವೃದ್ಧಿ ಹಾಗೂ ಹಿಂದುತ್ವ ವಿಚಾರದಲ್ಲಿ ನಿರಂತರವಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ರಾಜ್ಯಕ್ಕೆ ಮಾದರಿಯಾಗುವ ತುಳುನಾಡಿನ ಸೃಷ್ಟಿಕರ್ತ ಪರಶುರಾಮನ ಥೀಮ್ ಪಾರ್ಕ್ ನಿರ್ಮಾಣ,250ಕ್ಕೂ ಅಧಿಕ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡುವ ಮೂಲಕ ಜನತೆಗೆ ನೀರಾವರಿ ವ್ಯವಸ್ಥೆ ಕಲ್ಪಿಸಿದ್ದು ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದರು.
ಈ ಬಾರಿ ಎಲ್ಲಾ ಕಾರ್ಯಕರ್ತರು ಅವರ ಜತೆಗಿದ್ದು ಸುನಿಲ್ ಕುಮಾರ್ ಅವರನ್ನು 50 ಸಾವಿರ ಮತಗಳಿಂದ ಗೆಲ್ಲಲಿದ್ದಾರೆ . ಅದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಮತದಾರರು ಅಪಪ್ರಚಾರಗಳಿಗೆ ಕಿವಿಗೊಡದೇ ಅಭಿವೃದ್ಧಿಪರ ಚಿಂತನೆಯುಳ್ಳ ಸುನಿಲ್ ಕುಮಾರ್ ಅವರಿಗೆ ಮತ ಚಲಾಯಿಸುವಂತೆ ಮಹೇಶ್ ಶೆಟ್ಟಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಅನಂತಕೃಷ್ಣ ಶೆಣೈ,ಸಾಣೂರು ನರಸಿಂಹ ಕಾಮತ್ ಉಪಸ್ಥಿತರಿದ್ದರು