ಉತ್ತರಕನ್ನಡ : ಸದ್ಯಕ್ಕೆ ದಲಿತ ಮುಖ್ಯಮಂತ್ರಿ ಆಗುವ ವಿಚಾರದಲ್ಲಿ ಯಾವುದೇ ಚರ್ಚೆ ಬೇಡ, ದಲಿತ ಮುಖ್ಯಮಂತ್ರಿ ಆಗುವ ಕಾಲ ಬಂದಾಗ ಆ ಕುರಿತು ಮಾತನಾಡುತ್ತೇನೆ ಎಂದು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಅವರು ಶನಿವಾರ ಶಿರಸಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿ, ದಲಿತ ಸಿಎಂ ಮಾಡುವಂತೆ ನಾವು ಒತ್ತಾಯ ಮಾಡಬಹುದು, ಆದರೆ ನಿರ್ಧಾರ ಕೈಗೊಳ್ಳುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಸೂಕ್ತ ಸಮಯದಲ್ಲಿ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ.ಸದ್ಯಕ್ಕೆ ದಲಿತ ಸಿಎಂ ವಿಚಾರ ಇಲ್ಲ ಎಂದರು.ಪಕ್ಷದ ಮುಖಂಡ ಬಿ ಕೆ ಹರಿಪ್ರಸಾದ್ ಅವರನ್ನು ಪಕ್ಷ ಕಡೆಗಣನೆ ಮಾಡಿದೆಯೇ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ಹಿರಿಯರಿದ್ದಾರೆ ಅವರನ್ನು ಯಾರು ಕೆಳಗಿಳಿಸಲು ಆಗುವುದಿಲ್ಲ. ರಾಷ್ಟ್ರ ರಾಜಕಾರಣದಲ್ಲಿ ಸುಮಾರು 30 ವರ್ಷ ರಾಜಕೀಯ ಮಾಡಿದ್ದಾರೆ.ಅವರನ್ನು ಕಡೆಗಣಿಸಲು ಆಗುವುದಿಲ್ಲ ಆ ರೀತಿಯ ವಾತಾವರಣ ನಮ್ಮ ಪಕ್ಷದಲ್ಲಿ ಇಲ್ಲ. ನಾವು ಅವರನ್ನು ಭೇಟಿ ಮಾಡಿ ಮಾತಕತೆ ನಡೆಸಿದ್ದೇವೆ. ಸಚಿವ ಸ್ಥಾನ ಅವರಿಗಷ್ಟೇ ಅಲ್ಲ, ಹಲವು ಹಿರಿಯ ನಾಯಕರಿಗೆ ನೀಡಿಲ್ಲ. ಅವಕಾಶ ಬಂದಾಗ ಎಲ್ಲರಿಗೂ ಸಚಿವ ಸ್ಥಾನ ಕೊಡುತ್ತಾರೆ ಎಂದು ಹೇಳಿದರು.