ಬೆಂಗಳೂರು: ಬಿಜೆಪಿಗೆ ಅನಂತ್ ಕುಮಾರ್ ಹೆಗಡೆ ವಿರುದ್ಧ ಕ್ರಮಕೈಗೊಳ್ಳುವ ಧಮ್ ಹಾಗೂ ತಾಕತ್ ಇಲ್ಲ, ಹೆಗಡೆ ಈಗ ಹೇಳಿರುವುದನ್ನೇ ಹಿಂದೆ ಕಾಲಕಾಲಕ್ಕೆ ಆರ್.ಎಸ್.ಎಸ್ ನಾಯಕರು ಹೇಳಿದ್ದರು. ಹೆಗಡೆ ಒಂದು ಮುಖವಾಡ ಅಷ್ಟೇ, ಆರ್.ಎಸ್.ಎಸ್ ಬೆಂಬಲ ಇರುವುದರಿಂದ ಇಂತಹ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಅನಂತಕುಮಾರ ಹೆಗಡೆ ಸಂವಿಧಾನಕ್ಕೆ ವಿರುದ್ದವಾಗಿ ಮಾತನಾಡಿರುವುದು ವೈಯಕ್ತಿಕ ಹೇಳಿಕೆ ಎಂದು ಭಾರತೀಯ ಜನತಾ ಪಕ್ಷ ತಳ್ಳಿಹಾಕಿರುವುದು ನಾಚಿಕೆಗೇಡಿನ ನಡೆಯ ಪ್ರತೀಕ ಮಾತ್ರವಲ್ಲ ನೆಲದ ಕಾನೂನಿನ ಬಗ್ಗೆ ಅವರಿಗಿರುವ ತಿರಸ್ಕಾರವೂ ಹೌದು. ಈ ಹೇಳಿಕೆಯನ್ನು ಹೆಗಡೆ ತಮ್ಮ ಮನೆಯ ಅಡುಗೆಕೋಣೆಯಲ್ಲಿ ನೀಡಿದ್ದಲ್ಲ, ಸಾರ್ವಜನಿಕ ಸಮಾರಂಭದಲ್ಲಿ ಸಂಸದನಾಗಿ ಮಾತನಾಡಿರುವುದು. ಈ ವ್ಯತ್ಯಾಸ ತಿಳಿಯದಷ್ಟು ಬಿಜೆಪಿ ನಾಯಕರು ಮೂರ್ಖರಲ್ಲ, ಇವರಿಗೆ ಆರೆಸ್ಸೆಸ್ ಬೆಂಬಲದ ಅನಂತಕುಮಾರ ಹೆಗಡೆ ವಿರುದ್ಧ ಕ್ರಮಕೈಗೊಳ್ಳುವ ದಮ್ಮು ತಾಕತ್ತು ಎರಡೂ ಇಲ್ಲವೆಂದು ಬಿಜೆಪಿ ವಿರುದ್ಧ ಹರಿಹಾಯ್ದರು. ನರೇಂದ್ರ ಮೋದಿಯವರೂ ಸೇರಿದಂತೆ ಬಿಜೆಪಿ ನಾಯಕರ ಮುಂದೆ ಈಗ ಇರುವುದು ಎರಡೇ ಆಯ್ಕೆ. ಒಂದೋ ಹೆಗಡೆಯನ್ನು ತಕ್ಷಣ ಪಕ್ಷದಿಂದ ವಜಾಗೊಳಿಸಬೇಕು ಇಲ್ಲವೇ ಅವರ ಹೇಳಿಕೆಗೆ ತಮ್ಮ ಸಹಮತ ಇದೆ ಎಂದು ಘೋಷಿಸಬೇಕು. ನೋಡೋಣ ಇದೇ ವಿಷಯದ ಮೇಲೆ ಈ ಬಾರಿಯ ಲೋಕಸಭಾ ಚುನಾವಣೆ ನಡೆಯಲಿ ಎಂದು ಕುಟುಕಿದರು. ಅನಂತಕುಮಾರ್ ಹೆಗಡೆ ಸಂವಿಧಾನದ ವಿರುದ್ಧ ನೀಡುತ್ತಿರುವ ಹೇಳಿಕೆಗೆ ಅವರ ಬಿಜೆಪಿಯ ನಿಜವಾದ ‘‘ಹೈಕಮಾಂಡ್’’ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಪೂರ್ಣ ಬೆಂಬಲ ಇದೆ. ಆರ್.ಎಸ್.ಎಸ್ ಬಹಿರಂಗವಾಗಿ ಸಂವಿಧಾನಕ್ಕೆ ಬದ್ಧತೆ ಸಾರಿದ್ದರೂ ಅಂತರಂಗದಲ್ಲಿ ಎಂದೂ ಸಂವಿಧಾನವನ್ನಾಗಲಿ, ಅದರ ರಚನಕಾರರಾದ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಒಪ್ಪಿಕೊಂಡಿಲ್ಲ. ಹೆಗಡೆ ಹೇಳಿರುವುದನ್ನೇ ಕಾಲಕಾಲಕ್ಕೆ ಆರ್.ಎಸ್.ಎಸ್ ನಾಯಕರು ಹೇಳಿದ್ದರು. ಹೆಗಡೆ ಒಂದು ಮುಖವಾಡ ಅಷ್ಟೆ, ನಿಜವಾದ ಮುಖ ಆರ್.ಎಸ್.ಎಸ್ ಎಂದು ಟೀಕಿಸಿದರು.
ಸಂಸದನಾಗಿ ತಮ್ಮ ಸ್ವಂತ ಕ್ಷೇತ್ರಕ್ಕೆ ನಯಾಪೈಸೆಯಷ್ಟು ಕೆಲಸವನ್ನು ಮಾಡದ ಮತ್ತು ಲೋಕಸಭೆಯಲ್ಲಿ ಬಾಯಿ ಮುಚ್ಚಿಕೊಂಡೇ ಐದು ವರ್ಷಗಳನ್ನು ಪೂರ್ಣಗೊಳಿಸಿರುವ ಅನಂತ್ ಕುಮಾರ್ ಹೆಗಡೆ ವಿರುದ್ಧ ಉತ್ತರ ಕನ್ನಡದಾದ್ಯಂತ ಜನರಲ್ಲಿ ಆಕ್ರೋಶವಿದೆ. ಇದಕ್ಕಾಗಿ ಹಿಂದುತ್ವ ಅಪಾಯದಲ್ಲಿದೆ ಎಂಬ ಹುಸಿಭೀತಿಯನ್ನು ಜನರಲ್ಲಿ ಹುಟ್ಟಿಸಿ ಕೋಮುಭಾವನೆಯನ್ನು ಕೆರಳಿಸಿ ಮತಗಳ ಧ್ರುವೀಕರಣಗೊಳಿಸುವುದು ಅವರ ಉದ್ದೇಶವಾಗಿದೆ. ಇದಕ್ಕೆ ಆರ್.ಎಸ್.ಎಸ್ ಬೆಂಬಲ ಇರುವುದರಿಂದ ಬಿಜೆಪಿಯನ್ನೇ ಯಾಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಅವರು ಲೆಕ್ಕಕ್ಕಿಟ್ಟಿಲ್ಲ ಎಂದು ಕಿಡಿಕಾರಿದರು.
ಗ್ರಾಮ ಲೆಕ್ಕಿಗರ ನೇಮಕಾತಿ 2024: ಕರ್ನಾಟಕ ಕಂದಾಯ ಇಲಾಖೆಯ ಮೂಲಕ 1000 ಗ್ರಾಮ ಲೆಕ್ಕಿಗರ (VA) ಖಾಲಿ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ.






