ಮಂಗಳೂರು: ಗ್ಯಾರಂಟಿಗಳಿಂದ ಖಾಲಿಯಾಗಿರುವ ಖಜಾನೆ ತುಂಬಿಸಲು ರಾಜ್ಯ ಸರ್ಕಾರ ಹಾಲು, ಪೆಟ್ರೋಲ್ , ಡೀಸೆಲ್ , ಬಸ್ ಟೆಕೆಟ್ ದರ, ಆಸ್ತಿ ನೋಂದಣಿ ದರ ಸೇರಿ ಅನೇಕ ವಸ್ತುಗಳಿಗೆ ಬೆಲೆ ಏರಿಸಿರುವ ಕರ್ನಾಟಕ ರಾಜ್ಯ ಸರ್ಕಾರ ಈಗ ಕುಮ್ಕಿ ಭೂಮಿ ಮೇಲೆ ಕಣ್ಣಿಟ್ಟಿದ್ದು, ರೈತರಿಗೆ ಸಂಕಷ್ಟ ಎದುರಾಗಿದೆ. ಅವಿಭಜಿತ ದ.ಕ.ಜಿಲ್ಲೆಯಲ್ಲಿ ರೈತರ ಕುಮ್ಕಿ ಜಮೀನನ್ನು 30 ವರ್ಷಗಳ ಕಾಲ ಲೀಸಿಗೆ ನೀಡುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಒಂದು ಎಕರೆಗೆ 1 ಸಾವಿರ ರುಪಾಯಿಯಿಂದ ಹಿಡಿದು, 25 ಎಕರೆಗೆ 3,500 ರೂ ರೀತಿ ರಾಜ್ಯ ಸರ್ಕಾರ ಕುಮ್ಕಿ ಭೂಮಿಯನ್ನೂ ರೈತರಿಗೆ ಲೀಸ್‌ಗೆ ನೀಡಲು ಮುಂದಾಗಿದೆ.
ರಾಜ್ಯ ಸರ್ಕಾರದ ಈ ನಿರ್ಧಾರದ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ಹೊರಹಾಕಿದ್ದು, ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಬೆಲೆ ಹೆಚ್ಚಳ, ಸರ್ಕಾರದ ಆಸ್ತಿ ಮಾರಾಟ ಸೇರಿದಂತೆ ಪರ್ಯಾಯ ಮಾರ್ಗ ಹುಡುಕುತ್ತಿರುವ ಸರ್ಕಾರ ಈಗ ಕುಮ್ಕಿ ಭೂಮಿಯನ್ನು ಭೋಗ್ಯಕ್ಕೆ ನೀಡಲು ಹೊರಟಿದೆ. ಎಕರೆಗೆ 1 ಸಾವಿರದಂತೆ ಬೆಲೆ ನಿಗದಿ ಮಾಡಿರುವ ಕಾಂಗ್ರೆಸ್ ಸಣ್ಣ ಹಿಡುವಳಿದಾರರಿಗೆ ದೊಡ್ಡ ಹೊಡೆತ ನೀಡಲು ಮುಂದಾಗಿದೆ ಎಂದು ಕಿಡಿಕಾರಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ (ಉಡುಪಿ-ದಕ್ಷಿಣ ಕನ್ನಡ) ಮದರಾಸು ಪ್ರಾಂತ್ಯದ ಕಂದಾಯ ಆಡಳಿತ 1896ರ ಬಿಎಸ್‌ಒ 15(40)ರ ನಿಯಮಗಳ ಆಧಾರದಲ್ಲಿ ಕದೀಂ ವರ್ಗ ಜಮೀನಿನಲ್ಲಿ ಕೃಷಿ ಮಾಡುವ ರೈತರಿಗೆ 100 ಮೀ.ವರೆಗಿನ ಭೂಮಿ(ಕದೀಂ ವರ್ಗದಿಂದ 450 ಲಿಂಕ್ಸ್)ಯನ್ನು ಕುಮ್ಕಿ ಸವಲತ್ತಿನ ಭೂಮಿ ಎಂದು ಕೊಡಲಾಗಿದೆ. ಈ ಕುಮ್ಕಿ ಜಾಗವನ್ನು ಕೃಷಿಗೆ ಪೂರಕವಾದ ಮೇವು, ಸೊಪ್ಪುಗಳ ಬಳಕೆಗೆ ಕೊಡಲಾಗಿತ್ತು. 1964ರಲ್ಲಿ ರಾಜ್ಯದ ಒಂದೇ ಕಾಯಿದೆ ಜಾರಿಯಾದರೂ ಕಾಯಿದೆ ಕಲಂ 202(2)ರಲ್ಲಿ ನೀಡಿರುವಂತೆಯೇ ಯಾವುದೇ ಹಕ್ಕು, ಸೌಲಭ್ಯ, ಬಾಧ್ಯತೆಗಳಿಲ್ಲ ಎದಂ ಉಲ್ಲೇಖಿತವಿದೆ ಜೊತೆಗೆ ಕಾನೂನಿನಲ್ಲಿಯೂ ಎಲ್ಲ ಸೌಲಭ್ಯಗಳು ಮತ್ತು ಹಕ್ಕು ಊರ್ಜಿತದಲ್ಲಿದೆ.
ಕುಮ್ಕಿ ಭೂಮಿ ಹಕ್ಕುಗಳ ಹೋರಾಟಗಾರ ಎಂ.ಜಿ.ಸತ್ಯನಾರಾಯಣ ಅವರ ಪ್ರಕಾರ ಸರಕಾರ ಲೀಸ್ ನೀಡುವ ನಿರ್ಧಾರ ಅವೈಜ್ಞಾನಿಕವಾಗಿದ್ದು, ಕರ್ನಾಟಕ ಭೂಸುಧಾರಣಾ ನೀತಿ ನಿಯಮ 74ರ ಪ್ರಕಾರ(5) ಗೇಣಿ, ಲೀಸ್‌ಗೆ ನೀಡುವಂತಿಲ್ಲ. ಈ ಕಾನೂನು ಜಾರಿಯಲ್ಲಿರುವಾಗ ಕುಮ್ಕಿ ಭೂಮಿನ್ನು ಲೀಸ್ ನೀಡುವುದು ಕೂನೂನು ಪ್ರಕಾರ ಸರ್ಕಾರದ ಅಪರಾಧವಾಗುತ್ತದೆ ಎಂದಿದ್ದಾರೆ.