Share this news

ಬೆಂಗಳೂರು : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದ ಸಂತ್ರಸ್ತ ಬಾಲಕಿಯ ತಾಯಿಯ ಸಾವಿನ ಕುರಿತು ರಾಜ್ಯ ಮಹಿಳಾ ಆಯೋಗ ಅನುಮಾನ ವ್ಯಕ್ತಪಡಿಸಿದ್ದು, ಸಾವಿನ ಪ್ರಕರಣದ ತನಿಖೆ ನಡೆಸುವಂತೆ ಪೊಲೀಸ್‌‍ ಇಲಾಖೆಗೆ ರಾಜ್ಯ ಮಹಿಳಾ ಆಯೋಗದ ಮುಖ್ಯಸ್ಥೆ ನಾಗಲಕ್ಷ್ಮೀ ಚೌಧರಿ ಪತ್ರ ಬರೆದಿದ್ದಾರೆ.

ರಾಜ್ಯ ಪೊಲೀಸ್‌‍ ಆಯುಕ್ತರಿಗೆ ಪತ್ರ ಬರೆದು ಸೂಕ್ತ ತನಿಖೆ ನಡೆಸುವಂತೆ ಮಹಿಳಾ ಆಯೋಗದ ಮುಖ್ಯಸ್ಥೆ ನಾಗಲಕ್ಷೀ ಚೌಧರಿ ಆಗ್ರಹ ಮಾಡಿದ್ದು, ಆದಷ್ಟು ಬೇಗ ತನಿಖಾ ವರದಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಕೋರಿಕೊಂಡಿದ್ದಾರೆ.

ಪ್ರಕರಣದ ವಿವರ : ಯಡಿಯೂರಪ್ಪ ಅವರ ವಿರುದ್ಧ 2024ರ ಮಾ.15ರಂದು ಪೋಕ್ಸೋ ಪ್ರಕರಣ ದಾಖಲಾಗಿತ್ತು. ಅತ್ಯಾಚಾರ ಪ್ರಕರಣದಲ್ಲಿ ತಮಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಲು ಫೆ.2ರಂದು ಯಡಿಯೂರಪ್ಪ ಅವರ ನಿವಾಸಕ್ಕೆ ಹೋಗಿದ್ದಾಗ 17 ವರ್ಷದ ತಮ್ಮ ಮಗಳ ಮೇಲೆ ಯಡಿಯೂರಪ್ಪನವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸದಾಶಿವನಗರ ಠಾಣೆಗೆ ದೂರು ನೀಡಿದ್ದರು.

ಅದರನ್ವಯ ಪೋಕ್ಸೋ ಹಾಗೂ ಐಪಿಸಿ ಸೆಕ್ಷನ್‌ 354 (ಎ)ರಡಿ ಸದಾಶಿವನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಬಳಿಕ ಪ್ರಕರಣದ ತನಿಖೆಯನ್ನ ಸಿಐಡಿಗೆ ವಹಿಸಲಾಗಿತ್ತು.

ಆದರೆ ದೂರುದಾರ ಮಹಿಳೆ ಮೇ.27ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಉಸಿರಾಟದ ತೊಂದರೆಯಿಂದಾಗಿ ಹುಳಿಮಾವು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ನಿತ್ರಾಣಗೊಂಡು ಸಾವನ್ನಪ್ಪಿದ್ದರು. ಶ್ವಾಸಕೋಶದ ಕ್ಯಾನ್ಸರ್‌‌ನಿಂದ ಮಹಿಳೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು. ಮಹಿಳೆಯ ಸಾವು ಹಾಗೂ ಸಾವಿನ ನಂತರ ಮರಣೋತ್ತರ ಪರೀಕ್ಷೆ ನಡೆದಿರುವುದರ ಕುರಿತು ಅನುಮಾನಗಳಿರುವುದರಿಂದ ಸೂಕ್ತ ತನಿಖೆ ನಡೆಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಪತ್ರ ರವಾನಿಸಿದ್ದಾರೆ.

                        

                          

                        

                       

Leave a Reply

Your email address will not be published. Required fields are marked *